ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾದರೆ ಶಸ್ತ್ರಾಸ್ತ್ರ ತ್ಯಜಿಸಲು ಸಿದ್ಧ: ಹಮಾಸ್
PC : NDTV
ಗಾಝಾ: 1967ರ ಪೂರ್ವದ ಗಡಿಗಳನ್ನು ಹೊಂದಿರುವ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾದರೆ ಶಸ್ತ್ರಾಸ್ತ್ರ ತ್ಯಜಿಸಿ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲು ಹಮಾಸ್ ಸಿದ್ಧವಿದೆ ಎಂದು ಹಮಾಸ್ನ ಉನ್ನತ ರಾಜಕೀಯ ಮುಖಂಡರನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.
ಇಸ್ರೇಲ್ನೊಂದಿಗೆ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕದನವಿರಾಮಕ್ಕೆ ಹಮಾಸ್ ಸಿದ್ಧ ಎಂದು ಹಮಾಸ್ನ ರಾಜಕೀಯ ವಿಭಾಗದ ಉನ್ನತ ಮುಖಂಡ ಖಲೀಲ್ ಅಲ್-ಹಯಾ ಹೇಳಿದ್ದಾರೆ. ಗಾಝಾದಲ್ಲಿ ಕದನ ವಿರಾಮ ಜಾರಿ ಹಾಗೂ ಒತ್ತೆಯಾಳುಗಳ ವಿನಿಮಯಕ್ಕೆ ಸಂಬಂಧಿಸಿ ನಡೆಯುತ್ತಿರುವ ಸಂಧಾನ ಮಾತುಕತೆಯಲ್ಲಿ ಖಲೀಲ್ ಅವರು ಹಮಾಸ್ನ ಪ್ರತಿನಿಧಿಯಾಗಿದ್ದಾರೆ.
ಟರ್ಕಿಯ ಇಸ್ತಾನ್ಬುಲ್ನಲ್ಲಿ ಮಾಧ್ಯಮದ ಜತೆ ಮಾತನಾಡಿದ ಖಲೀಲ್, ಗಾಝಾ ಮತ್ತು ಪಶ್ಚಿಮದಂಡೆಯಲ್ಲಿ ಏಕೀಕೃತ ಸರಕಾರ ರಚನೆಗೆ ಹಮಾಸ್ ಫೆಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್(ಪಿಎಲ್ಒ) ಜತೆ ಸೇರಲು ಸಿದ್ಧವಿದೆ ಎಂದಿದ್ದಾರೆ. ಗಾಝಾ ಪಟ್ಟಿ ಮತ್ತು ಪಶ್ಚಿಮದಂಡೆಯಲ್ಲಿ ಸಂಪೂರ್ಣ ಸಾರ್ವಭೌಮ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯನ್ನು ಮತ್ತು ಅಂತರಾಷ್ಟ್ರೀಯ ನಿರ್ಣಯಗಳಿಗೆ ಅನುಗುಣವಾಗಿ ಫೆಲೆಸ್ತೀನಿಯನ್ ನಿರಾಶ್ರಿತರು ಹಿಂದಿರುಗಿ ಬರಲು ಅವಕಾಶ ನೀಡುವ ಕ್ರಮವನ್ನು ಹಮಾಸ್ ಸಮ್ಮತಿಸುತ್ತದೆ ಎಂದರು.
ಇದು ಸಾಧ್ಯವಾದರೆ, ಹಮಾಸ್ನ ಮಿಲಿಟರಿ ಘಟಕವನ್ನು ವಿಸರ್ಜಿಸಲಾಗುವುದು. ಆಕ್ರಮಿತ ಶಕ್ತಿಗಳ ವಿರುದ್ಧ ದೀರ್ಘಾವಧಿ ಹೋರಾಡಿದ ಅನುಭವಿ ಜನರು, ತಾವು ಸ್ವತಂತ್ರ ರಾಷ್ಟ್ರಗಳಾದಾಗ ಮತ್ತು ತಮ್ಮ ಹಕ್ಕುಗಳನ್ನು ಪಡೆದಾಗ ರಾಜಕೀಯ ಪಕ್ಷಗಳಾಗಿ ಪರಿವರ್ತನೆಯಾಗುತ್ತಾರೆ ಮತ್ತು ಇದಕ್ಕಾಗಿ ಹೋರಾಡಿದ ಸಶಸ್ತ್ರ ಗುಂಪುಗಳು ರಾಷ್ಟ್ರೀಯ ಸೇನೆಯಾಗಿ ಪರಿವರ್ತನೆಗೊಳ್ಳುತ್ತದೆ ಎಂದು ಖಲೀಲ್ ಪ್ರತಿಪಾದಿಸಿದ್ದಾರೆ.
ಹಮಾಸ್ ಕೆಲವೊಮ್ಮೆ ಇಸ್ರೇಲ್ ಜೊತೆಗೆ ಫೆಲೆಸ್ತೀನ್ ರಾಷ್ಟ್ರದ ಸಾಧ್ಯತೆಗೆ ಸಂಬಂಧಿಸಿದಂತೆ ತನ್ನ ಸಾರ್ವಜನಿಕ ನಿಲುವನ್ನು ಕೆಲವೊಮ್ಮೆ ಮೃದುಗೊಳಿಸಿದೆ. ಆದರೆ ಅದರ ರಾಜಕೀಯ ಕಾರ್ಯಕ್ರಮವು ಈಗಲೂ ಅಧಿಕೃತವಾಗಿ ` ಫೆಲೆಸ್ತೀನ್ನ ಸಂಪೂರ್ಣ ವಿಮುಕ್ತಿಗೆ(ಸಮುದ್ರದಿಂದ ನದಿಯವರೆಗೆ) ಹೊರತಾದ ಯಾವುದೇ ಪರ್ಯಾಯವನ್ನು ತಿರಸ್ಕರಿಸುತ್ತದೆ. ಅಂದರೆ ಜೋರ್ಡಾನ್ ನದಿಯಿಂದ ಮೆಡಿಟರೇನಿಯನ್ ಸಮುದ್ರದವರೆಗಿನ ಪ್ರದೇಶ(ಈಗ ಇಸ್ರೇಲ್ನ ಭೂಭಾಗ ಸೇರಿದ ಪ್ರದೇಶ). ಎರಡು ರಾಷ್ಟ್ರಗಳ ಪರಿಹಾರ ಸೂತ್ರವನ್ನು ಹಮಾಸ್ ಒಪ್ಪಿಕೊಳ್ಳುವ ಸೂಚನೆ ಇದಾಗಿದೆ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.