ಕಠಿಣ ಕಾನೂನಿಂದ ಹೊಸ ಹೂಡಿಕೆಗೆ ತಡೆ: ಚೀನಾಕ್ಕೆ ಇಯು ಎಚ್ಚರಿಕೆ
Photo- PTI
ಬೀಜಿಂಗ್: ಚೀನಾದಲ್ಲಿರುವ ಕಠಿಣ ಭದ್ರತಾ ಕಾನೂನುಗಳು ಮತ್ತು ಹೆಚ್ಚು ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ರಾಜಕೀಯ ಹಸ್ತಕ್ಷೇಪವು ಚೀನಾದಲ್ಲಿ ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ಯುರೋಪಿಯನ್ ಸಂಸ್ಥೆಗಳಿಗೆ ತೊಡಕಾಗಿದೆ ಮತ್ತು ತಮ್ಮ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ ಎಂದು ಯುರೋಪಿಯನ್ ಯೂನಿಯನ್(ಇಯು)ನ ಕಾರ್ಯಕಾರಿ ಉಪಾಧ್ಯಕ್ಷ ವಾಲ್ದಿಸ್ ಡೊಂಬ್ರೊವ್ಸಿಸ್ ಹೇಳಿದ್ದಾರೆ.
ಬೀಜಿಂಗ್ನ ತ್ಸಿಂಗ್ಹುವ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುರೋಪಿಯನ್ ಬಣ ಮತ್ತು ಚೀನಾದ ನಡುವೆ ವ್ಯಾಪಾರ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ಪಾರದರ್ಶಕತೆ ಮತ್ತು ಮುಕ್ತತೆ ದೀರ್ಘಾವಧಿಯಲ್ಲಿ ಗೆಲುವಿನ ಕಾರ್ಯತಂತ್ರವಾಗಿದೆ. ಇದೇ ವೇಳೆ ಉಕ್ರೇನ್ನಲ್ಲಿ ನಡೆಸುತ್ತಿರುವ ಯುದ್ಧಕ್ಕಾಗಿ ರಶ್ಯವನ್ನು ಖಂಡಿಸಲು ಚೀನಾ ನಿರಾಕರಿಸುವುದು ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕತೆಯ ಪ್ರತಿಷ್ಟೆಗೆ ಅಪಾಯವುಂಟು ಮಾಡಲಿದೆ ಎಂದರು. ಯುರೋಪಿಯನ್ ಯೂನಿಯನ್ ಸ್ಪರ್ಧೆಗಳನ್ನು ಸ್ವಾಗತಿಸುತ್ತದೆ. ಅದು ನಮ್ಮ ಸಂಸ್ಥೆಗಳನ್ನು ಪ್ರಬಲಗೊಳಿಸುತ್ತದೆ ಮತ್ತು ಹೆಚ್ಚು ನವೀನಗೊಳಿಸುತ್ತದೆ. ಆದರೆ ಸ್ಪರ್ಧೆ ನ್ಯಾಯಸಮ್ಮತವಾಗಿರಬೇಕು. ಅನ್ಯಾಯದ ಪೈಪೋಟಿ ಎದುರಾದರೆ ಅದನ್ನು ದೃಢಚಿತ್ತ, ದೃಢ ನಿಲುವಿನಿಂದ ಎದುರಿಸಲು ನಾವು ಸಿದ್ಧ' ಎಂದವರು ಹೇಳಿದ್ದಾರೆ.
`ಚೀನಾವು ಯುರೋಪಿಯನ್ ವ್ಯವಹಾರಗಳಿಗೆ ಆಕರ್ಷಕ ಹೂಡಿಕೆ ಅವಕಾಶವಾಗಿ ಉಳಿದಿದೆ. ಜಗತ್ತಿಗೆ ಮುಕ್ತವಾಗಿರುವುದರಿಂದ ಚೀನಾ ಮತ್ತು ಯುರೋಪಿಯನ್ ಯೂನಿಯನ್ ಎರಡೂ ಅಪಾರ ಪ್ರಯೋಜನ ಪಡೆದಿದೆ. ಚೀನಾದಲ್ಲಿ ಇನ್ನಷ್ಟು ಹೂಡಿಕೆ ಮಾಡಲು ಯುರೋಪಿಯನ್ ಕಂಪೆನಿಗಳು ಸಿದ್ಧವಾಗಿವೆ- ಆದರೆ ಪರಿಸ್ಥಿತಿ ಸೂಕ್ತವಾಗಿದ್ದರೆ ಮಾತ್ರ' ಎಂದು ಡೊಂಬ್ರೊವ್ಸಿಸ್ ಹೇಳಿದ್ದಾರೆ.
ಆರ್ಥಿಕ ಭದ್ರತೆಗೆ ನಮ್ಮ ವಿಧಾನವು ಪ್ರಮಾಣಾನುಗುಣವಾಗಿದೆ ಮತ್ತು ನಿಖರವಾಗಿದೆ. ನಮ್ಮ ಕ್ರಮವು ಸಂಪೂರ್ಣವಾಗಿ ಅಪಾಯ ಆಧಾರಿತವಾಗಿರುತ್ತದೆ. ಚೀನಾದಲ್ಲಿ ಯುರೋಪಿಯನ್ ವ್ಯವಹಾರಕ್ಕೆ ಹೆಚ್ಚುತ್ತಿರುವ ಸವಾಲುಗಳಿಂದಾಗಿ ಕಳೆದ ದಶಕಗಳಲ್ಲಿ ನಮ್ಮ ನಡುವೆ ಇದ್ದ `ಗೆಲುವು-ಗೆಲುವು' ಸಂಬಂಧ ಮುಂದಿನ ವರ್ಷಗಳಲ್ಲಿ `ಸೋಲು-ಸೋಲು' ಎಂದು ಬದಲಾಗುವ ಅಪಾಯವಿದೆ' ಎಂದವರು ಎಚ್ಚರಿಸಿದ್ದಾರೆ.
ಪ್ರಾದೇಶಿಕ ಸಮಗ್ರತೆಯು ಅಂತರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಚೀನಾಕ್ಕೆ ಯಾವಾಗಲೂ ಪ್ರಮುಖ ತತ್ವವಾಗಿದೆ. ಆದರೆ ರಶ್ಯದ ಯುದ್ಧವು ಈ ತತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಉಕ್ರೇನ್ ವಿರುದ್ಧದ ರಶ್ಯದ ಯುದ್ಧದ ಬಗ್ಗೆ ಚೀನಾದ ನಿಲುವನ್ನು ಅರ್ಥ ಮಾಡಿಕೊಳ್ಳುವುದು ನಮಗೆ ತುಂಬಾ ಕಷ್ಟವಾಗಿದೆ. ಏಕೆಂದರೆ ಇದು ಚೀನಾದ ಮೂಲಭೂತ ತತ್ವಗಳನ್ನು ಉಲ್ಲಂಘಿಸುತ್ತದೆ' ಎಂದು ವಾಲ್ದಿಸ್ ಡೊಂಬ್ರೊವ್ಸಿಸ್ ಪ್ರತಿಪಾದಿಸಿದ್ದಾರೆ.