ಆರೋಗ್ಯಸೇವೆ ವಂಚನೆ:ಭಾರತೀಯ ಪ್ರಜೆಗೆ 9 ವರ್ಷ ಜೈಲು
Photo:NDTV
ವಾಷಿಂಗ್ಟನ್: 2.8 ದಶಲಕ್ಷ ಡಾಲರ್ ಮೊತ್ತದ ಆರೋಗ್ಯಸೇವೆ ವಂಚನೆ ಪ್ರಕರಣದಲ್ಲಿ ಭಾರತೀಯ ಪ್ರಜೆಗೆ 9 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ಅಮೆರಿಕದ ನ್ಯಾಯ ಇಲಾಖೆ ಹೇಳಿದೆ.
ಆರೋಗ್ಯ ಸೇವೆ ವಂಚನೆ, ಇಂಟರ್ ನೆಟ್ ಮಾಧ್ಯಮ ಬಳಸಿ ವಂಚನೆಗೆ ಪಿತೂರಿ, ಹಣ ಅಕ್ರಮ ವರ್ಗಾವಣೆ, ಗುರುತು ಮರೆಮಾಚಿರುವುದು ಹಾಗೂ ಸಾಕ್ಷಿಗಳನ್ನು ತಿದ್ದಲು ನಡೆಸಿದ ಪ್ರಯತ್ನದ ಆರೋಪ ಸಾಬೀತಾಗಿದ್ದು ಮಿಚಿಗನ್ ನಿವಾಸಿ, ಭಾರತೀಯ ಮೂಲದ ಯೋಗೇಶ್ ಕೆ. ಪಂಚೋಲಿಗೆ 9 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.
`ಶ್ರಿಂಗ್ ಹೋಮ್ ಕೇರ್' ಎಂಬ ಹೆಸರಿನ ರೋಗಿಗಳಿಗೆ ಮನೆಯಲ್ಲೇ ಸೇವೆ ಸಲ್ಲಿಸುವ ಸಂಸ್ಥೆಯನ್ನು ನಡೆಸುತ್ತಿದ್ದ ಪಂಚೋಲಿ, ಮೆಡಿಕೇರ್ ವ್ಯವಸ್ಥೆಯಲ್ಲಿ ರೋಗಿಗಳಿಗೆ ನೀಡುವ ಸೇವೆಗೆ ಶುಲ್ಕ ಇಲ್ಲದಿದ್ದರೂ, ತನ್ನ ಸಂಸ್ಥೆಯ ಹೆಸರನ್ನು ಮರೆಮಾಚಿ, ಇತರ ಸಂಸ್ಥೆಗಳ ಹೆಸರು, ಸಹಿಯನ್ನು ನಕಲಿ ಮಾಡಿ ಬಿಲ್ ನೀಡಿ ವಂಚಿಸುತ್ತಿದ್ದ. 2 ತಿಂಗಳ ಅವಧಿಯಲ್ಲಿ ವೈದ್ಯಕೀಯ ಸೇವೆಯನ್ನು ಒದಗಿಸದೆ ಮೆಡಿಕೇರ್ ವ್ಯವಸ್ಥೆಯ ಮೂಲಕ ಸುಮಾರು 2.8 ದಶಲಕ್ಷ ಡಾಲರ್ ಹಣವನ್ನು ಪಡೆದು ಅದನ್ನು ನಕಲಿ ಸಂಸ್ಥೆಗಳ ಹೆಸರಲ್ಲಿ ತೆರೆದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದ ಎಂದು ನ್ಯಾಯ ಇಲಾಖೆ ಹೇಳಿದೆ.
ಮೆಡಿಕೇರ್ ಎಂಬುದು 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅಮೆರಿಕದ ಫೆಡರಲ್ ಸರಕಾರದ ಆರೋಗ್ಯ ವಿಮೆ ಸೇವೆಯಾಗಿದೆ. ಪ್ರಕರಣದ ವಿಚಾರಣೆಯ ಮುನ್ನಾದಿನ `ಸರಕಾರದ ಸಾಕ್ಷಿಗಳು ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿರುವುದರಿಂದ ಅವರನ್ನು ಅಮೆರಿಕದಿಂದ ಗಡೀಪಾರು ಮಾಡಬೇಕು' ಎಂದು ಆಗ್ರಹಿಸುವ ಪತ್ರವನ್ನು ನಕಲಿ ಹೆಸರಿನ ಮೂಲಕ ಫೆಡರಲ್ ಸರಕಾರದ ಹಲವು ಏಜೆನ್ಸಿಗಳಿಗೆ ಇ-ಮೇಲ್ ಮೂಲಕ ರವಾನಿಸಿ ವಿಚಾರಣೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಆರೋಪವೂ ಪಂಚೋಲಿಯ ಮೇಲಿದೆ.