ಮಕ್ಕಾದಲ್ಲಿ ಭಾರೀ ಮಳೆ, ಬಿರುಗಾಳಿ
ಮಕ್ಕಾ: ಮುಸ್ಲಿಮರ ಪವಿತ್ರ ಸ್ಥಳವಾದ ಮಕ್ಕಾ ನಗರದಲ್ಲಿ ಮಂಗಳವಾರ ಬೀಸಿದ ಭಾರೀ ಮಳೆ, ಬಿರುಗಾಳಿಯಿಂದಾಗಿ ನಗರವಾಸಿಗಳು ಮತ್ತು ಹಜ್ ಯಾತ್ರಾರ್ಥಿಗಳು ಆಶ್ರಯಕ್ಕಾಗಿ ತಡಕಾಡುವಂತಾಯಿತು.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಸೌದಿ ಅರೇಬಿಯಾದ ಕೆಲ ಭಾಗಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು khaleejtimes.com ವರದಿ ಮಾಡಿದೆ.
ಹಜ್ ಯಾತ್ರಾರ್ಥಿಗಳು ಬಿರುಗಾಳಿಗೆ ತತ್ತರಿಸಿ ಹೋಗಿರುವ ಹಲವಾರು ವೀಡಿಯೋಗಳನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಳಲ್ಲಿ ನಡೆಯುತ್ತಿದ್ದವರು ಹತ್ತಿರದ ಅಂಗಡಿಗಳಿಗೆ ಓಡಿ ಆಶ್ರಯ ಪಡೆಯಲು ಪ್ರಯತ್ನಿಸಿದರೆ ಮಕ್ಕಾದ ಗ್ರ್ಯಾಂಡ್ ಮಸೀದಿಯ ಹಲವು ಸಿಬ್ಬಂದಿಗಳು ಬಿರುಗಾಳಿಯಿಂದ ತಪ್ಪಿಸಲು ಸಾಧ್ಯವಾಗದೆ ಅಲ್ಲಿದ್ದ ದೊಡ್ಡ ತ್ಯಾಜ್ಯದ ಕ್ಯಾನ್‌ಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿರುವ ದೃಶ್ಯಗಳೂ ಕಂಡುಬಂದಿವೆ.
ಗುಡುಗು ಸಿಡಿಲು, ಮಿಂಚಿನ ಆರ್ಭಟವೂ ಜೋರಾಗಿತ್ತು, ನೇರಳೆ ಬಣ್ಣದ ಮಿಂಚೊಂದು ನೇರವಾಗಿ ಗ್ರ್ಯಾಂಡ್ ಮಸೀದಿಯತ್ತ ಅಪ್ಪಳಿಸುವ ದೃಶ್ಯವೂ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಗುರುವಾರ ತನಕ ಮಕ್ಕಾ ಪ್ರಾಂತ್ಯದಲ್ಲಿ ಗುಡುಗು ಸಹಿತ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.