ಜಪಾನ್ ನಲ್ಲಿ ಪ್ರವಾಹ, ಭೂಕುಸಿತ | ಓರ್ವ ಮೃತ್ಯು, 13 ಮಂದಿ ನಾಪತ್ತೆ
PC : PTI
ಟೋಕಿಯೊ : ಜಪಾನ್ ನ ಇಷಿಕಾವಾ ಪ್ರಾಂತದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ. ಇತರ 13 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಮಧ್ಯ ಜಪಾನ್ ನ ಪಶ್ಚಿಮದ ಕರಾವಳಿ ಪ್ರಾಂತದಲ್ಲಿ ಹತ್ತಕ್ಕೂ ಅಧಿಕ ನದಿಗಳ ಕಟ್ಟೆ ಒಡೆದು ಹಲವು ಮನೆಗಳು ಹಾಗೂ ಕೃಷಿ ಭೂಮಿ ಜಲಾವೃತಗೊಂಡಿವೆ. ಇಷಿಕಾವ ಪ್ರಾಂತದಲ್ಲಿ ಒಬ್ಬ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ. ಮೂವರು ನಾಪತ್ತೆಯಾಗಿದ್ದು ಇವರಲ್ಲಿ ಇಬ್ಬರು ನೆರೆನೀರಲ್ಲಿ ಕೊಚ್ಚಿಹೋಗಿರುವ ಮಾಹಿತಿಯಿದೆ ಎಂದು ಸ್ಥಳೀಯಾಡಳಿತವನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಹಲವೆಡೆ ಭೂಕುಸಿತ ಸಂಭವಿಸಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ರಕ್ಷಣಾ ತಂಡದ ಸುಮಾರು 20 ಕಾರ್ಯಕರ್ತರು ಸುರಂಗದೊಳಗೆ ಸಿಕ್ಕಿಬಿದ್ದಿದ್ದಾರೆ. ವಜಿಮಾ ಪ್ರಾಂತದಲ್ಲಿ ಕನಿಷ್ಠ 10 ಮಂದಿ ನಾಪತ್ತೆಯಾಗಿದ್ದಾರೆ.
ಪ್ರವಾಹ ಮತ್ತು ಭೂಕುಸಿತದಿಂದ ಹಲವು ಮನೆಗಳಿಗೆ ಹಾನಿಯಾಗಿದ್ದು ವಿದ್ಯುತ್ ಕಂಬ ನೆಲಕ್ಕುರುಳಿದ್ದು ಸುಮಾರು 6000 ನಿವಾಸಿಗಳಿಗೆ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ. ವಜಿಮ, ಸುಝು ಮತ್ತು ನೊಟೊ ನಗರಗಳ ಸುಮಾರು 44,700 ನಿವಾಸಿಗಳನ್ನು ಸ್ಥಳಾಂತರಗೊಳಿಸಲು ಸೂಚಿಸಲಾಗಿದೆ. ಉತ್ತರ ಇಷಿಕಾವದ ನಿಗಾಟ ಮತ್ತು ಯಮಾಗಟ ಪ್ರದೇಶಗಳ ಸುಮಾರು 16,700 ನಿವಾಸಿಗಳನ್ನು ಸ್ಥಳಾಂತರಿಸಲಾಗುವುದು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಇಷಿಕಾವದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ವಜಿಮಾದಲ್ಲಿ ಶನಿವಾರ ಬೆಳಿಗ್ಗೆ ಒಂದು ಗಂಟೆಯಲ್ಲಿ 4.7 ಇಂಚು ಮಳೆಯಾಗಿದ್ದು ಇದು 1929ರ ಬಳಿಕದ ದಾಖಲೆ ಪ್ರಮಾಣದ ಮಳೆಯಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ.