ನೇಪಾಳದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ, ಭೂಕುಸಿತ | 11 ಮಂದಿ ಮೃತ್ಯು
Photo : PTI
ಕಠ್ಮಂಡು: ನೇಪಾಳದಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ, ಭೂಕುಸಿತಕ್ಕೆ ಕನಿಷ್ಠ 11 ಮಂದಿ ಬಲಿಯಾಗಿದ್ದು ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳು ಜಲಾವೃತಗೊಂಡು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದಾಗಿ ಅಧಿಕಾರಿಗಳು ರವಿವಾರ ಮಾಹಿತಿ ನೀಡಿದ್ದಾರೆ.
8 ಮಂದಿ ಪ್ರವಾಹದಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದರೆ ಇತರ 12 ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರ ದಾನ್ಬಹಾದ್ದುರ್ ಕರ್ಕಿ ಹೇಳಿದ್ದಾರೆ.
ರಸ್ತೆಗೆ ಕುಸಿದು ಬಿದ್ದಿರುವ ಕಲ್ಲು, ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಕಾರ್ಯ ಮುಂದುವರಿದಿದೆ. ಆಗ್ನೇಯ ನೇಪಾಳದಲ್ಲಿ ಕೋಷಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ನದಿಯ ಹರಿವು ಹೆಚ್ಚುತ್ತಿದ್ದು ಸಂಭಾವ್ಯ ಪ್ರವಾಹದ ಅಪಾಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸ್ಥಳೀಯರಿಗೆ ಸೂಚಿಸಲಾಗಿದೆ. ರವಿವಾರ ಬೆಳಿಗ್ಗೆ 9 ಗಂಟೆಗೆ(ಸ್ಥಳೀಯ ಕಾಲಮಾನ) ಕೋಶಿ ನದಿಯಲ್ಲಿ ನೀರಿನ ಹರಿವು ಸೆಕೆಂಡಿಗೆ 3,69,000 ಕ್ಯೂಸೆಕ್ಸ್ನಷ್ಟಿತ್ತು. ಅದರ ಸಾಮಾನ್ಯ ಹರಿವು ಸೆಕೆಂಡಿಗೆ 1,50,000 ಕ್ಯೂಸೆಕ್ಸ್. ಹೆಚ್ಚುವರಿ ನೀರನ್ನು ಹೊರಸಾಗಿಸಲು ಕೋಶಿ ಅಣೆಕಟ್ಟೆಯ ಎಲ್ಲಾ 56 ಗೇಟುಗಳನ್ನೂ ತೆರೆಯಲಾಗಿದೆ, ಸಾಮಾನ್ಯ ಸಂದರ್ಭದಲ್ಲಿ 12 ಗೇಟುಗಳನ್ನು ತೆರೆಯಲಾಗುತ್ತದೆ ಎಂದು ಸುನ್ಸಾರಿ ಜಿಲ್ಲೆಯ ಹಿರಿಯ ಅಧಿಕಾರಿ ಬೇದ್ರಾಜ್ ಫೂಯಲ್ರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಪಶ್ಚಿಮ ನೇಪಾಳದ ನಾರಾಯಣಿ, ರಾಪ್ತಿ ಮತ್ತು ಮಹಾಕಾಳಿ ನದಿ ನೀರಿನ ಮಟ್ಟವೂ ಏರುತ್ತಿದೆ. ಬೆಟ್ಟಪ್ರದೇಶದಲ್ಲಿರುವ ಕಠ್ಮಂಡುವಿನಲ್ಲಿ ಹಲವು ನದಿಗಳ ನೀರು ದಡದಲ್ಲಿ ಉಕ್ಕಿ ಹರಿಯುತ್ತಿದ್ದು ರಸ್ತೆಗಳು ಮತ್ತು ಹಲವು ಮನೆಗಳು ಜಲಾವೃತಗೊಂಡಿವೆ. ಜನರು ಬಕೆಟ್ಗಳ ಮೂಲಕ ನೀರನ್ನು ಹೊರಹಾಕುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ. ನೇಪಾಳದಲ್ಲಿ ಜೂನ್ 15ರಂದು ಮಳೆಗಾಲ ಆರಂಭಗೊಂಡಂದಿನಿಂದ ಭೂಕುಸಿತ, ಸಿಡಿಲು, ಪ್ರವಾಹದಿಂದಾಗಿ ಕನಿಷ್ಠ 50 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.