ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ನೆರವಿನ ಹಸ್ತ:ಪಾಕ್ ಗೆ ಸೌದಿಯಿಂದ 2 ಬಿಲಿಯ ಡಾಲರ್ ಠೇವಣಿ
Photo: NDTV
ಇಸ್ಲಾಮಾಬಾದ್: ತೀವ್ರ ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನವು, ಸೌದಿ ಆರೇಬಿಯದಿಂದ 2 ಶತಕೋಟಿ ಡಾಲರ್ ಠೇವಣಿಯನ್ನು ಸ್ವೀಕರಿಸಿದೆಯೆಂದು ಪಾಕ್ ವಿತ್ತ ಸಚಿವ ಇಶಾಕ್ ದಾರ್ ಮಂಗಳವಾರ ತಿಳಿಸಿದ್ದಾರೆ. ಪಾಕಿಸ್ತಾನಕ್ಕೆ ಸಾಲ ನೀಡಿಕೆಗೆ ಅನುಮೋದನೆ ನೀಡುವ ಕುರಿತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯ ಮಹತ್ವದ ಸಭೆ ನಡೆಯುವುದಕ್ಕೆ ಮುಂಚಿತವಾಗಿ ಸೌದಿ ಆರೇಬಿಯದಿಂದ ಈ ನೆರವು ದೊರೆತಿದೆ.
‘‘ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ (ಎಸ್ಬಿಪಿ) ಸೌದಿ ಆರೇಬಿಯದಿಂದ 2 ಶತಕೋಟಿ ಡಾಲರ್ ಠೇವಣಿಯನ್ನು ಠೇವಣಿಯನ್ನು ಸ್ವೀಕರಿಸಿದೆ. ಈ ಹಣದ ಹರಿವು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನವು ಹೊಂದಿರುವ ವಿದೇಶಿ ವಿನಿಮಯದ ಪ್ರಮಾಣವನ್ನು ಹೆಚ್ಚಿಸಿದೆ. 2023ರ ಜುಲೈ 14ರ ವಾರಾಂತ್ಯದ ವಿದೇಶಿ ವಿನಿಮಯ ಸೂಚ್ಯಂಕದಲ್ಲಿ ಇದು ಪ್ರತಿಫಲಿತವಾಗಲಿದೆ ಎಂದು ಸಚಿವ ದಾರ್ ಅವರು ಟ್ವೀಟ್ ಮಾಡಿದ್ದಾರೆ.
ಸೌದಿ ಆರೇಬಿಯವು ಪಾಕ್ ಸ್ಟೇಟ್ ಬ್ಯಾಂಕ್ ನಲ್ಲಿ 3 ಶತಕೋಟಿ ಡಾಲರ್ ಠೇವಣಿಯಿರಿಸಿದ್ದಕ್ಕಾಗಿ ಸೌದಿ ಆರೇಬಿಯದ ನಾಯಕತ್ವ ಹಾಗೂ ಅಲ್ಲಿನ ಸೋದರ ಸಮಾನ ಜನತೆಗೆ ಗಾಢವಾದ ಕೃತಜ್ಞತೆಯನ್ನು ಆರ್ಪಿಸುವುದಾಗಿ ಪ್ರಧಾನಿ ಶಹಬಾಝ್ ಶರೀಫ್ ಅವರು ತಿಳಿಸಿದ್ದಾರೆ ಹಾಗೂ ಪಾಕಿಸ್ತಾನಕ್ಕೆ ಆರ್ಥಿಕ ನೆರವನ್ನು ಖಾತರಿಪಡಿಸಿದ್ದಕ್ಕಾಗಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೂ ಕೃತಜ್ಞತೆ ಅರ್ಪಿಸಿದ್ದಾರೆ.
ಸೌದಿ ಆರೇಬಿಯದ ಠೇವಣಿಯು ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಬಲಪಡಿಸಲು ನೆರವಾಗಲಿದೆ. ಪಾಕಿಸ್ತಾನದ ಆರ್ಥಿಕತೆ ಚೇತರಿಕೆ ಬಗ್ಗೆ ನಮ್ಮ ಸೋದರ ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ, ಸಮುದಾಯಕ್ಕೆ ಭರವಸೆ ಹೆಚ್ಚುತ್ತಿರುವುದನ್ನು ಇದು ಪ್ರತಿಫಲಿಸಿದೆ. ಪಾಕಿಸ್ತಾನದ ಆರ್ಥಿಕತೆಯನ್ನು ಸುಧಾರಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸಲು ನಾವು ಬದ್ಧರಾಗಿದ್ದೇವೆ’’ ಎಂದು ಶಹಬಾಝ್ ಹೇಳಿದ್ದಾರೆ.
ಈಗಾಗಲೇ ಸೌದಿ ಆರೇಬಿಯವು ಹಣದ ನೆರವ್ನ ನೀಡುವುದಾಗಿ ಘೋಷಿಸಿತ್ತು. ಆದರೆ ಎಸ್ಬಿಪಿಲ್ಲಿ ಹಣವನ್ನು ಠೇವಣಿಯಿಡುವ ಮುನ್ನ ಐಎಂಎಫ್ ಒಪ್ಪಂದ ಏರ್ಪಡುವುದನ್ನು ಅದು ಕಾದಿತ್ತು.
ಪಾಕ್ ಸರಕಾರ ಹಾಗೂ ಐಎಂಎಫ್ ನಡುವೆ ಹಲವು ತಿಂಗಳುಗಳ ಕಾಲ ನಡೆದ ಮಾತುಕತೆಯ ಬಳಿಕ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ಆ ದೇಶಕ್ಕೆ ತಾತ್ಕಾಲಿಕವಾಗಿ 3 ಶತಕೋಟಿ ಡಾಲರ್ ಸಾಲವನ್ನು ನೀಡುವ ಬಗ್ಗೆ ಸಿಬ್ಬಂದಿ ಮಟ್ಟದಲ್ಲಿ ಒಪ್ಪಂದಕ್ಕೆ ಬಂದಿವೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯಕಾರಿಣಿ ಮಂಡಳಿಯು ಜುಲೈ 12ರಂದು ಸಭೆ ಸೇರಲಿದ್ದು ಪಾಕಿಸ್ತಾನಕ್ಕೆ ತಾತ್ಕಾಲಿಕವಾಗಿ ಒಪ್ಪಂದದಡಿ ಆರ್ಥಿಕ ನೆರವನ್ನು ನೀಡುವ ಬಗ್ಗೆ ಪರಾಮರ್ಶೆ ನಡೆಸಲಿದೆ.