ಪರಂಪರೆ ಇಸ್ಲಾಮಿನ ಆತ್ಮವಾಗಿದೆ: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್
ಮೇಲೇಶ್ಯದಲ್ಲಿ ಅಂತಾರಾಷ್ಟ್ರೀಯ ಸ್ವಹೀಹುಲ್ ಬುಖಾರಿ ಪಾರಾಯಣ ಸಂಗಮ ಸಮಾರೋಪ
ಕೌಲಾಲಂಪುರ: ಪರಂಪರೆ ಇಸ್ಲಾಮಿನ ಆತ್ಮವಾಗಿದೆ. ಶಾಂತಿ, ಸಮಾಧಾನ, ಸುರಕ್ಷತೆ ಸಿಗಬೇಕಾದರೆ ವಿಶ್ವಾಸಿಗಳು ಪರಂಪರಾಗತ ನಂಬಿಕೆಯ ರೀತಿಗಳನ್ನು ಅನುಸರಿಸಬೇಕು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಮಲೇಶ್ಯಾದ ಪುತ್ರಜಯದ ಪುತ್ರಾ ಮಸೀದಿಯಲ್ಲಿ ನಡೆದ ಜಾಗತಿಕ ವಿದ್ವಾಂಸರು, ಆಡಳಿತಗಾರರು, ಸಚಿವರು ಹಾಗೂ ವಿದ್ಯಾರ್ಥಿಗಳು ನೆರೆದಿದ್ದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸ್ವಹೀಹುಲ್ ಬುಖಾರಿ ಪಾರಾಯಣ ಸಂಗಮದ ಸಮಾರೋಪ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮಾತನಾಡಿದರು.
'ಸಹೀಹ್ ಅಲ್-ಬುಖಾರಿ ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಹದೀಸ್ ಗ್ರಂಥವಾಗಿದ್ದು, ಮಹಾನ್ ಗುರುವರ್ಯರ ಅಂಗೀಕಾರ ಮತ್ತು ಪ್ರೋತ್ಸಾಹದಿಂದಾಗಿ ಈ ಪುಸ್ತಕವನ್ನು ಇಷ್ಟು ದಿನಗಳ ಕಾಲ ಇತರರಿಗೆ ಕಲಿಸುವ ಭಾಗ್ಯ ನಮಗೆ ಲಭಿಸಿದೆ ಎಂದು ಅವರು ಈ ಸಂದರ್ಭ ಹೇಳಿದರು.
ಮಲೇಷ್ಯಾದ ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಉಲಮಾಗಳ ಸಾನಿಧ್ಯದಲ್ಲಿ ಕಳೆದ ಹನ್ನೆರಡು ದಿನಗಳಿಂದ ನಡೆಯುತ್ತಿರುವ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಪ್ರಧಾನ ಮಂತ್ರಿ ಅನ್ವರ್ ಇಬ್ರಾಹೀಮ್ ಉದ್ಘಾಟಿಸಿದರು.
ಸಹೀಹುಲ್ ಬುಖಾರಿ ಅಧ್ಯಯನ ಕಾಲದ ತನ್ನ ಕಲಿಕೆ, ಚಿಂತನೆ ಹಾಗೂ ಚರ್ಚೆಗಳು ಮತ್ತು ವಿವಿಧ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ರಚಿಸಿರುವ 20 ಸಂಪುಟಗಳ ʼತದ್ಕೀರುಲ್ ಖಾರಿʼ ವ್ಯಾಖ್ಯಾನ ಕೃತಿ ಪ್ರಧಾನಿಯವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು.
ಧಾರ್ಮಿಕ ವಿದ್ವಾಂಸರಿಗೆ ನೀಡಲಾಗುವ ಮಲೇಷ್ಯಾ ಸರಕಾರದ ಅತ್ಯುನ್ನತ 'ಮಅಲ್ ಹಿಜ್ರಾ' ಪುರಸ್ಕಾರವನ್ನು ಇತ್ತೀಚೆಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕರ್ ಮುಸ್ಲಿಯಾರ್ ಪಡೆದ ಬಳಿಕ ಅವರು ಭಾಗವಹಿಸಿದ ಮೊದಲ ಕಾರ್ಯಕ್ರಮ ಇದಾಗಿತ್ತು.
ಕಳೆದ ಅರವತ್ತು ವರ್ಷಗಳಿಂದ ಸ್ವಹೀಹುಲ್ ಬುಖಾರಿ ತರಗತಿ ನಡೆಸಿಕೊಡುತ್ತಿರುವ ಜಾಗತಿಕ ವಿದ್ವಾಂಸ ಎಂಬ ನೆಲೆಯಲ್ಲಿ ಮಲೇಷ್ಯನ್ ಸರಕಾರವು ಕಾಂತಪುರಂರಿಗೆ ವಿಶೇಷ ಆಹ್ವಾನ ನೀಡಿತ್ತು.
ಸ್ವಹೀಹುಲ್ ಬುಖಾರಿ ಪೂರ್ಣವಾಗಿ ಪಾರಾಯಣ ಮಾಡಿದ 750 ವಿದ್ವಾಸರು ಹಾಗೂ ದೇಶದ ವಿವಿಧ ಭಾಗಗಳಿಂದ ಬಂದ ಐದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಧಾರ್ಮಿಕ ವ್ಯವಹಾರಗಳ ಸಚಿವ ಡಾ. ಮುಹಮ್ಮದ್ ನಯೀಮ್ ಬಿನ್ ಮುಖ್ತಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪಪ್ರಧಾನಿಗಳಾದ ಅಹ್ಮದ್ ಝಾಹಿದ್ ಬಿನ್ ಹಾಮಿದಿ, ಫಾದಿಲ್ಲಾಹ್ ಬಿನ್ ಯೂಸುಫ್, ಮಲೇಷಿಯಾದ ಮುಫ್ತಿ ಡಾ. ಲುಕ್ಮಾನ್ ಬಿನ್ ಅಬ್ದುಲ್ಲಾ ಹಾಗೂ ವಿವಿಧ ದೇಶಗಳ ವಿದ್ವಾಂಸರಾದ ಶೇಖ್ ಮುಹಮ್ಮದ್ ಅಬ್ದುಲ್ ಹುದಾ ಅಲ್ ಯಾಕುಬಿ ಸಿರಿಯಾ, ಅಲ್ ಹಬೀಬ್ ಉಮರ್ ಜಲ್ಲಾನಿ ಮಲೇಷ್ಯಾ, ಶೇಖ್ ಅಫೀಫುದ್ದೀನ್ ಜೀಲಾನಿ ಬಾಗ್ದಾದ್, ಡಾ. ಜಮಾಲ್ ಫಾರೂಕ್ ಈಜಿಪ್ಟ್, ಶೇಖ್ ಇಸ್ಮಾಯಿಲ್ ಮುಹಮ್ಮದ್ ಸ್ವಾದಿಕ್ ಉಜ್ಬೇಕಿಸ್ತಾನ್, ಅಲಿ ಝೈನುಲ್ ಅಬಿದೀನ್ ಬಿನ್ ಅಬೂಬಕರ್ ಹಮೀದ್, ಮರ್ಕಝ್ ಪ್ರತಿನಿಧಿಗಳಾಗಿ ಸಿ. ಮುಹಮ್ಮದ್ ಫೈಝಿ, ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್, ಸೈಯದ್ ಶಿಹಾಬುದ್ದೀನ್ ಅಹ್ದಲ್ ಮುತ್ತನೂರ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.