ಲೆಬನಾನ್ - ಇಸ್ರೇಲ್ ವಾಯುದಾಳಿಯಲ್ಲಿ ಹಿಜ್ಬುಲ್ಲಾದ ಮತ್ತೊಬ್ಬ ಉನ್ನತ ಮುಖಂಡ ಮೃತ್ಯು
ಹಿಜ್ಬುಲ್ಲಾ ಮುಖಂಡ ನಬಿಲ್ ಕೌಕ್ | PC : AP
ಬೈರುತ್ : ದಕ್ಷಿಣ ಲೆಬನಾನ್ನಲ್ಲಿ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಮತ್ತೊಬ್ಬ ಉನ್ನತ ಮುಖಂಡ ನಬಿಲ್ ಕೌಕ್ ಹತರಾಗಿರುವುದಾಗಿ ಇಸ್ರೇಲ್ ಸೇನೆ ರವಿವಾರ ಹೇಳಿದೆ.
ಹಿಜ್ಬುಲ್ಲಾದ `ನಿರೋಧಕ ಭದ್ರತಾ ಘಟಕ'ದ ಕಮಾಂಡರ್ ಮತ್ತು ಹಿಜ್ಬುಲ್ಲಾದ ಉನ್ನತ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಹಿಜ್ಬುಲ್ಲಾದ ಹಿರಿಯ ಕಮಾಂಡರ್ ಗಳ ಜತೆ ನಿಕಟ ಸಂಪರ್ಕ ಹೊಂದಿದ್ದ ನಬಿಲ್, ಇಸ್ರೇಲ್ ಮತ್ತು ಅದರ ಪ್ರಜೆಗಳ ವಿರುದ್ಧದ ಭಯೋತ್ಪಾದಕ ದಾಳಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಇಸ್ರೇಲ್ ಸೇನೆ ಹೇಳಿದೆ.
ಈ ಮಧ್ಯೆ, ಶನಿವಾರ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ಬಾಂಬ್ದಾಳಿಯಲ್ಲಿ ಕನಿಷ್ಠ 33 ಮಂದಿ ಸಾವನ್ನಪ್ಪಿದ್ದು 195 ಮಂದಿ ಗಾಯಗೊಂಡಿದ್ದಾರೆ. ರವಿವಾರ ಲೆಬನಾನ್ನಲ್ಲಿ ಹಿಜ್ಬುಲ್ಲಾ ನೆಲೆಗಳ ಮೇಲೆ ಮತ್ತೆ ವ್ಯಾಪಕ ದಾಳಿ ಮುಂದುವರಿದಿದೆ ಎಂದು ಲೆಬನಾನ್ನ ಆರೋಗ್ಯ ಇಲಾಖೆ ಹೇಳಿದೆ.
ಲೆಬನಾನ್ನ ಬೆಕಾ ಕಣಿವೆಯಲ್ಲಿ ರವಿವಾರ ಇಸ್ರೇಲ್ ಪಡೆಗಳ ಕ್ಷಿಪಣಿಯು ಮನೆಯೊಂದಕ್ಕೆ ಅಪ್ಪಳಿಸಿದ್ದು ಕನಿಷ್ಟ 15 ಮಂದಿ ಹತರಾಗಿರುವುದಾಗಿ ವರದಿಯಾಗಿದೆ.