ಲೆಬನಾನ್ ನಲ್ಲಿ ಪೇಜರ್ ಸ್ಫೋಟ | ಕನಿಷ್ಠ 8 ಮಂದಿ ಮೃತ್ಯು, 2,750 ಮಂದಿಗೆ ಗಾಯ ; ಇಸ್ರೇಲ್ ಕೈವಾಡದ ಶಂಕೆ
ಇರಾನ್ ರಾಯಭಾರಿಗೆ ಗಾಯ
PC : X
ಬೈರುತ್ : ಲೆಬನಾನಿನ ಬೈರುತ್ನ ಉಪನಗರಗಳು, ಸಿರಿಯಾದ ಕೆಲವು ಭಾಗಗಳಲ್ಲಿ ಮಂಗಳವಾರ ಪೇಜರ್ಗಳು ಸ್ಫೋಟಗೊಂಡ ನಂತರ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇರಾನ್ನ ರಾಯಭಾರಿ ಸೇರಿದಂತೆ ಸುಮಾರು 2,750 ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಘಟನೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಶಂಕಿಸಿರುವ ಹಿಜ್ಬುಲ್ಲಾ, ತನ್ನ ಹೇಳಿಕೆಯಲ್ಲಿ ಪ್ರತೀಕಾರದ ಸೂಚನೆ ನೀಡಿದೆ.
ಒಂದು ಸಣ್ಣ ರೇಡಿಯೊ ರಿಸೀವರ್ ಆಗಿರುವ ಪೇಜರ್ `ಬೀಪ್' ಶಬ್ದದ ಮೂಲಕ ಒಳಬರುವ ಸಂದೇಶಗಳ ಬಗ್ಗೆ ಸೂಚನೆ ನೀಡುತ್ತದೆ. ಪೇಜರ್ ನ ಪರದೆಯ ಮೇಲೆ ಸಂದೇಶ ಮೂಡುತ್ತದೆ. ಪೇಜರ್ ಗಳ ಸ್ಫೋಟವು ಇಸ್ರೇಲ್ನೊಂದಿಗಿನ ಸುಮಾರು ಒಂದು ವರ್ಷದ ಯುದ್ಧದಲ್ಲಿ ಗುಂಪು ಅನುಭವಿಸಿದ ದೊಡ್ಡ ಭದ್ರತಾ ಉಲ್ಲಂಘನೆಯಾಗಿದೆ ಎಂದು ಹಿಜ್ಬುಲ್ಲಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಕ್ಕೂ ಮುನ್ನ, ಈ ಸ್ಫೋಟದಲ್ಲಿ ತನ್ನ ಸಂಘಟನೆಯ ಇಬ್ಬರು ಸದಸ್ಯರು ಹಾಗೂ ಓರ್ವ ಬಾಲಕಿ ಮೃತಪಟ್ಟಿದ್ದಾಳೆ ಎಂದು ಹಿಜ್ಬುಲ್ಲಾ ದೃಢಪಡಿಸಿತ್ತು. ಸ್ಫೋಟದ ಕಾರಣವನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಹಿಜ್ಬುಲ್ಲಾ ಸಂಘಟನೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಹಿಜ್ಬುಲ್ಲಾ ಸಂಘಟನೆಯ ಸದಸ್ಯರು ಹೊಂದಿದ್ದ ಪೇಜರ್ ಗಳನ್ನು ಸ್ಫೋಟಿಸಲಾಗಿದೆ ಎಂದು ಹಿರಿಯ ಸೇನಾ ಬೇಹುಗಾರಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೈರೂತ್ ನ ದಕ್ಷಿಣ ಉಪ ನಗರಗಳಿಂದ ಸ್ಥಳೀಯ ಮಾಧ್ಯಮಗಳಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೊ ಮತ್ತು ಫೋಟೊಗಳ ಪ್ರಕಾರ, ತಮ್ಮ ಕೈ ಅಥವಾ ಪ್ಯಾಂಟಿನ ಜೇಬಿನ ಬಳಿ ಗಾಯಗಳಾಗಿ ಪಾದಚಾರಿ ಮಾರ್ಗದಲ್ಲಿ ಹಲವಾರು ಜನರು ಬಿದ್ದಿರುವುದು ಸೆರೆಯಾಗಿದೆ.
ಇದಕ್ಕೂ ಮುನ್ನ, ಹಿಜ್ಬುಲ್ಲಾ ಚಲನವಲನಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ, ಸಂಘಟನೆಯ ಸದಸ್ಯರು ಮೊಬೈಲ್ ಫೋನ್ ಗಳನ್ನು ತಮ್ಮೊಂದಿಗೆ ಒಯ್ಯಬಾರದು ಎಂದು ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಎಚ್ಚರಿಕೆ ನೀಡಿದ್ದರು.