ಲೆಬನಾನ್ನಲ್ಲಿ ಭೂದಾಳಿ ತೀವ್ರಗೊಳಿಸಿದ ಇಸ್ರೇಲ್ | ನಾಲ್ಕನೇ ತುಕಡಿ ಸೇರ್ಪಡೆ
ಲೆಬನಾನ್ನಲ್ಲಿ ಕದನ ವಿರಾಮ ಪ್ರಯತ್ನಗಳಿಗೆ ಬೆಂಬಲ : ಹಿಜ್ಬುಲ್ಲಾ
ಸಾಂದರ್ಭಿಕ ಚಿತ್ರ (PTI)
ಜೆರುಸಲೇಂ : ದಕ್ಷಿಣ ಲೆಬನಾನ್ನಲ್ಲಿ ತನ್ನ ಪಡೆ `ಸ್ಥಳೀಯ, ಸೀಮಿತ ಮತ್ತು ಉದ್ದೇಶಿತ' ಭೂ ದಾಳಿಯನ್ನು ಮುಂದುವರಿಸಿದ್ದು ಅದನ್ನು ಕ್ರಮೇಣ ಹೆಚ್ಚಿಸುತ್ತಿದೆ ಎಂದು ಇಸ್ರೇಲ್ ಸೇನೆ ಮಂಗಳವಾರ ಹೇಳಿದೆ.
ಲೆಬನಾನ್ನಲ್ಲಿ ನಡೆಯುತ್ತಿರುವ ಭೂ ದಾಳಿ ಸೀಮಿತವಾಗಿಯೇ ಮುಂದುವರಿಯುವುದಾಗಿ ನಿರೀಕ್ಷಿಸುತ್ತೇನೆ ಎಂದು ಇಸ್ರೇಲ್ನ ಮಿತ್ರರಾಷ್ಟ್ರ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಪ್ರತಿಕ್ರಿಯಿಸಿದ್ದಾರೆ. ಲೆಬನಾನ್ನಲ್ಲಿನ ಭೂ ಕಾರ್ಯಾಚರಣೆಗೆ 4ನೇ ತುಕಡಿಯನ್ನು ನಿಯೋಜಿಸಿರುವುದಾಗಿ ಇಸ್ರೇಲ್ ಘೋಷಿಸಿದೆ. ದಕ್ಷಿಣ ಲೆಬನಾನ್ನ ಪಶ್ಚಿಮ ಪ್ರಾಂತದಲ್ಲಿ 146ನೇ ಮೀಸಲು ತುಕಡಿ ಸೋಮವಾರ ರಾತ್ರಿ ಭೂದಾಳಿಯನ್ನು ಆರಂಭಿಸಿದೆ. ದಕ್ಷಿಣ ಲೆಬನಾನ್ನಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಮೂರು ತುಕಡಿಗಳನ್ನು ಈ ತುಕಡಿ ಸೇರಿಕೊಂಡಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಗಡಿ ಪ್ರದೇಶದಲ್ಲಿ ಹಿಜ್ಬುಲ್ಲಾದ ಮೂಲ ಸೌಕರ್ಯಗಳನ್ನು ನಾಶಗೊಳಿಸಿ ಉತ್ತರ ಇಸ್ರೇಲ್ನ ನಿವಾಸಿಗಳು ತಮ್ಮ ಮನೆಗೆ ಮರಳಲು ಅನುವು ಮಾಡಿಕೊಡಲು ಲೆಬನಾನ್ನೊಳಗೆ 15,000ಕ್ಕೂ ಅಧಿಕ ಯೋಧರನ್ನು ನಿಯೋಜಿಸಲಾಗಿದೆ ಎಂದು ಐಡಿಎಫ್ ಹೇಳಿದೆ.
ಮಂಗಳವಾರ ದಕ್ಷಿಣ ಲೆಬನಾನ್ನಲ್ಲಿ ನಡೆದ ಹೋರಾಟದಲ್ಲಿ ತನ್ನ ಇಬ್ಬರು ಯೋಧರು ಸಾವನ್ನಪ್ಪಿದ್ದು ಇದರೊಂದಿಗೆ ಕಳೆದ ವಾರದಿಂದ ಲೆಬನಾನ್ನಲ್ಲಿ ನಡೆಯುತ್ತಿರುವ ಭೂದಾಳಿಯ ಸಂದರ್ಭ ಮೃತಪಟ್ಟ ಯೋಧರ ಸಂಖ್ಯೆ 11ಕ್ಕೇರಿದೆ ಎಂದು ಐಡಿಎಫ್ ಹೇಳಿದೆ. ಮಂಗಳವಾರ ಗುಪ್ತಚರ ಮಾಹಿತಿ ಆಧರಿಸಿದ ನಿಖರ ದಾಳಿಯಲ್ಲಿ ಹಿಜ್ಬುಲ್ಲಾ ಪ್ರಧಾನ ಕಚೇರಿಯ ಕಮಾಂಡರ್ ಸುಹೈಲ್ ಹುಸೇನ್ ಹುಸೇನಿಯನ್ನು ಹತ್ಯೆ ಮಾಡಲಾಗಿದೆ. ಈ ಕಚೇರಿ ಹಿಜ್ಬುಲ್ಲಾ ಸಂಘಟನೆಯ ವಿವಿಧ ವಿಭಾಗಗಳ ಆರ್ಥಿಕ ವ್ಯವಹಾರ ಮತ್ತು ನಿರ್ವಹಣೆಯ ಮೇಲುಸ್ತುವಾರಿ ವಹಿಸಿತ್ತು ಎಂದು ಇಸ್ರೇಲ್ ಸೇನೆ ಮಂಗಳವಾರ ಘೋಷಿಸಿದೆ.
ಲೆಬನಾನ್ನಲ್ಲಿ ಕದನ ವಿರಾಮ ಪ್ರಯತ್ನಗಳಿಗೆ ಬೆಂಬಲ : ಹಿಜ್ಬುಲ್ಲಾ
ಲೆಬನಾನ್ನಲ್ಲಿ ಕದನ ವಿರಾಮ ಪ್ರಯತ್ನಗಳಿಗೆ ತನ್ನ ಬೆಂಬಲವಿದೆ ಎಂದು ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಪಡೆ ಮಂಗಳವಾರ ಹೇಳಿದೆ.
ಕದನ ವಿರಾಮ ಒಪ್ಪಂದದ ಬಗ್ಗೆ ನಡೆಯುವ ಮಾತುಕತೆಯನ್ನು ಬೆಂಬಲಿಸುವುದಾಗಿ ಹಿಜ್ಬುಲ್ಲಾ ಮುಖಂಡ ನಯೀಮ್ ಕಸ್ಸೆಮ್ ಹೇಳಿದ್ದಾರೆ. ಗಾಝಾ ಯುದ್ಧ ಅಂತ್ಯಗೊಂಡರೆ ಮಾತ್ರ ಲೆಬನಾನ್-ಇಸ್ರೇಲ್ ಗಡಿಭಾಗದಲ್ಲಿ ಕದನ ವಿರಾಮ ಸಾಧ್ಯ ಎಂಬ ಷರತ್ತನ್ನು ಇದೇ ಮೊದಲ ಬಾರಿಗೆ ಹಿಜ್ಬುಲ್ಲಾ ಉಲ್ಲೇಖಿಸಿಲ್ಲ. ಕದನ ವಿರಾಮ ಒಪ್ಪಂದದ ಬಗ್ಗೆ ಸಂಸತ್ನ ಸ್ಪೀಕರ್ ನಡೆಸುತ್ತಿರುವ ಪ್ರಯತ್ನ ಹಾಗೂ ಅವರ ರಾಜಕೀಯ ಚಟುವಟಿಕೆಯನ್ನು ಹಿಜ್ಬುಲ್ಲಾ ಬೆಂಬಲಿಸಲಿದೆ ಎಂದವರು ಹೇಳಿದ್ದಾರೆ.