ಇರಾನ್ ನ ಪರಮಾಣು ಸ್ಥಾವರಗಳ ಮೇಲೆ ಮೊದಲು ದಾಳಿ ನಡೆಸಿ: ಇಸ್ರೇಲ್ ಗೆ ಡೊನಾಲ್ಡ್ ಟ್ರಂಪ್ ಸಲಹೆ
ಡೊನಾಲ್ಡ್ ಟ್ರಂಪ್ (PTI)
ವಾಷಿಂಗ್ಟನ್: ಇರಾನ್ ನ ಇತ್ತೀಚಿನ ಕ್ಷಿಪಣಿ ದಾಳಿಗಳಿಗೆ ಉತ್ತರವಾಗಿ ಇಸ್ರೇಲ್ ಆ ದೇಶದ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಬೇಕು ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶುಕ್ರವಾರ ಉತ್ತರ ಕರೋನಿಲಾದಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಟ್ರಂಪ್,ಇಸ್ರೇಲ್ ಇರಾನಿನ ಪರಮಾಣು ಕಾರ್ಯಕ್ರಮವನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆಯ ಕುರಿತು ಈ ವಾರ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಕೇಳಲಾಗಿದ್ದ ಪ್ರಶ್ನೆಯನ್ನು ಉಲ್ಲೇಖಿಸಿ, ಇಸ್ರೇಲ್ ಇರಾನಿನ ಪರಮಾಣು ಸ್ಥಾವರಗಳ ಮೇಲೆ ಮೊದಲು ದಾಳಿ ನಡೆಸಬೇಕು ಎಂದು ಹೇಳಿದರು.
ನೀವು ಇರಾನಿನ ಪರಮಾಣು ಕೇಂದ್ರಗಳ ಮೇಲೆ ದಾಳಿಯನ್ನು ಬೆಂಬಲಿಸುತ್ತೀರಾ ಎಂದು ಬುಧವಾರ ಸುದ್ದಿಗಾರರು ಕೇಳಿದ್ದ ಪ್ರಶ್ನೆಗೆ ಬೈಡೆನ್, ಇಲ್ಲ ಎಂದು ಉತ್ತರಿಸಿದ್ದರು.
ಶುಕ್ರವಾರ ಟೌನ್ಹಾಲ್ ಮಾದರಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಓರ್ವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘ಬೈಡೆನ್ ಪ್ರಶ್ನೆಯನ್ನು ತಪ್ಪಾಗಿ ಗ್ರಹಿಸಿದ್ದರು ಎಂದು ನಾನು ಭಾವಿಸಿದ್ದೇನೆ. ಪರಮಾಣು ಸ್ಥಾವರಗಳ ಮೇಲೆಯೇ ದಾಳಿ ನಡೆಸಬೇಕಲ್ಲವೇ? ಅಣ್ವಸ್ತ್ರಗಳು ನಾವು ಹೊಂದಿರುವ ಅತ್ಯಂತ ದೊಡ್ಡ ಅಪಾಯವಾಗಿವೆ’ ಎಂದರು.
‘ಮೊದಲು ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿ ಮತ್ತು ಉಳಿದವುಗಳ ಬಗ್ಗೆ ನಂತರ ಚಿಂತಿಸಿ’ ಎಂದು ಬೈಡೆನ್ ಉತ್ತರಿಸಬೇಕಿತ್ತು ಎಂದು ಟ್ರಂಪ್ ಹೇಳಿದರು.