ಹಿಜ್ಬುಲ್ಲಾದ ನೂತನ ಮುಖಂಡ ಸಫೀಯುದ್ದೀನ್ ಇಸ್ರೇಲ್ ದಾಳಿಯಲ್ಲಿ ಮೃತ್ಯು : ವರದಿ
ಹಾಶಿಮ್ ಸಫೀಯುದ್ದೀನ್ | PC:x/@the_faraz_tweet
ಬೈರುತ್ : ಲೆಬನಾನ್ ರಾಜಧಾನಿಯಲ್ಲಿ ಹಿಜ್ಬುಲ್ಲಾ ಮುಖಂಡ ಹಸನ್ ನಸ್ರಲ್ಲಾ ಹತರಾದ ಒಂದು ವಾರದೊಳಗೆ, ಅವರ ಉತ್ತರಾಧಿಕಾರಿ ಎಂದು ಭಾವಿಸಲಾದ ಹಾಶಿಮ್ ಸಫೀಯುದ್ದೀನ್ ದಕ್ಷಿಣ ಬೈರುತ್ನಲ್ಲಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಭೂಗತ ಬಂಕರ್ನಲ್ಲಿ ಸಫೀಯುದ್ದೀನ್ ಹಾಗೂ ಇತರ ಉನ್ನತ ಹಿಜ್ಬುಲ್ಲಾ ಮುಖಂಡರು ಬೈರುತ್ನ ದಹೀಹ್ ಉಪನಗರದಲ್ಲಿ ಸಭೆ ನಡೆಸುತ್ತಿರುವ ಮಾಹಿತಿಯ ಮೇರೆಗೆ ಗುರುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿರುವುದಾಗಿ ಇಸ್ರೇಲ್ ಭದ್ರತಾ ಪಡೆ(ಐಡಿಎಫ್)ಯನ್ನು ಉಲ್ಲೇಖಿಸಿ `ದಿ ಜೆರುಸಲೇಂ ಪೋಸ್ಟ್' ಶನಿವಾರ ವರದಿ ಮಾಡಿದೆ. ನಸ್ರಲ್ಲಾ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಟ್ಟಿದ್ದ ಸಫೀಯುದ್ದೀನ್ ಹಿಜ್ಬುಲ್ಲಾದ ಕಾರ್ಯಕಾರಿ ಮಂಡಳಿ ಮುಖ್ಯಸ್ಥರಾಗಿ ಮಿಲಿಟರಿ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸುತ್ತಿದ್ದರು. ನಸ್ರಲ್ಲಾ ಸೋದರ ಸಂಬಂಧಿಯಾಗಿರುವ ಸಫೀಯುದ್ದೀನ್ ರನ್ನು 2017ರಲ್ಲಿ ಅಮೆರಿಕ `ಭಯೋತ್ಪಾದಕ' ಪಟ್ಟಿಗೆ ಸೇರಿಸಿತ್ತು.
ಈ ಮಧ್ಯೆ, ದಕ್ಷಿಣ ಲೆಬನಾನ್ನ ಕೆಲವು ಪ್ರದೇಶಗಳಲ್ಲಿ ಇಸ್ರೇಲ್ ಪಡೆಗಳ ಭೂ ಕಾರ್ಯಾಚರಣೆ ಹಾಗೂ ವೈಮಾನಿಕ ಕಾರ್ಯಾಚರಣೆ ಮುಂದುವರಿದಿದ್ದು ಹಿಜ್ಬುಲ್ಲಾ ಪಡೆಗಳು ತೀವ್ರ ಪ್ರತಿದಾಳಿ ನಡೆಸಿವೆ ಎಂದು ವರದಿಯಾಗಿದೆ. ಮಂಗಳವಾರ ಆರಂಭಗೊಂಡ ಭೂ ಕಾರ್ಯಾಚರಣೆಯಲ್ಲಿ ಕನಿಷ್ಠ 9 ಯೋಧರು ಸಾವನ್ನಪ್ಪಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
► ಸಫೀಯುದ್ದೀನ್ ಶುಕ್ರವಾರದಿಂದ ಸಂಪರ್ಕದಲ್ಲಿಲ್ಲ: ಲೆಬನಾನ್
ಹತ್ಯೆಯಾದ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಸಂಭಾವ್ಯ ಉತ್ತರಾಧಿಕಾರಿ ಸಫೀಯುದ್ದೀನ್ ಶುಕ್ರವಾರದಿಂದ ಸಂಪರ್ಕದಲ್ಲಿಲ್ಲ ಎಂದು ಲೆಬನಾನ್ ಭದ್ರತಾ ಪಡೆಗಳ ಮೂಲಗಳು ಶನಿವಾರ ಹೇಳಿವೆ.
ಗುರುವಾರ ತಡರಾತ್ರಿ ಬೈರುತ್ನ ಉಪನಗರದಲ್ಲಿ ಭೂಗತ ಬಂಕರ್ನಲ್ಲಿ ಸಫೀಯುದ್ದೀನ್ ನೇತೃತ್ವದಲ್ಲಿ ಹಿಜ್ಬುಲ್ಲಾ ಮುಖಂಡರ ಸಭೆ ನಡೆಯುತ್ತಿರುವ ಮಾಹಿತಿಯಂತೆ ಗುರುವಾರ ತಡರಾತ್ರಿ ಬಾಂಬ್ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಹೇಳಿತ್ತು. ದಾಳಿಯ ಪರಿಣಾಮದ ಬಗ್ಗೆ ಮಿಲಿಟರಿ ಇನ್ನೂ ಪರಿಶೀಲನೆ ನಡೆಸುತ್ತಿರುವುದಾಗಿ ಇಸ್ರೇಲ್ ಸೇನೆಯ ಕಮಾಂಡರ್ ಲೆ|ಕ| ನಡಾವ್ ಶೊಶಾನಿ ಶುಕ್ರವಾರ ಹೇಳಿಕೆ ನೀಡಿದ್ದರು. ಸಫೀಯುದ್ದೀನ್ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಇಸ್ರೇಲ್ ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಶುಕ್ರವಾರದಿಂದ ಬೈರುತ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬಾಂಬ್ ದಾಳಿ ತೀವ್ರಗೊಳಿಸಿರುವುದರಿಂದ ರಕ್ಷಣಾ ಕಾರ್ಯಕರ್ತರು ಸಫೀಯುದ್ದೀನ್ ಹಾಗೂ ಇತರ ಮುಖಂಡರಿದ್ದ ಬಂಕರ್ನ ಸ್ಥಳವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಲೆಬನಾನ್ ಭದ್ರತಾ ಪಡೆಯ ಮೂಲಗಳು ಹೇಳಿವೆ. ಸಫೀಯುದ್ದೀನ್ ಅವರ ಬಗ್ಗೆ ಹಿಜ್ಬುಲ್ಲಾ ಯಾವುದೇ ಹೇಳಿಕೆ ನೀಡಿಲ್ಲ.