ಹಾಂಕಾಂಗ್ | 14 ಪ್ರಜಾಪ್ರಭುತ್ವ ಕಾರ್ಯಕರ್ತರು ತಪ್ಪಿತಸ್ಥರು, ಇಬ್ಬರ ಖುಲಾಸೆ
ಸಾಂದರ್ಭಿಕ ಚಿತ್ರ
ಹಾಂಕಾಂಗ್ : ಗುರುವಾರ ಹಾಂಕಾಂಗ್ ಹೈಕೋರ್ಟ್ನಲ್ಲಿ ನಡೆದ ಮಹತ್ವದ ವಿಚಾರಣೆಯಲ್ಲಿ ಹಾಂಕಾಂಗ್ನ 14 ಪ್ರಜಾಪ್ರಭುತ್ವ ಕಾರ್ಯಕರ್ತರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದ್ದು ಇತರ ಇಬ್ಬರನ್ನು ಖುಲಾಸೆಗೊಳಿಸಿರುವುದಾಗಿ ವರದಿಯಾಗಿದೆ.
ಈ ಪ್ರಕರಣವು ಜಾಗತಿಕ ವಾಣಿಜ್ಯ ಕೇಂದ್ರವೆಂಬ ಹೆಗ್ಗಳಿಕೆ ಹೊಂದಿರುವ ಹಾಂಕಾಂಗ್ನ ಖ್ಯಾತಿಗೆ ಮತ್ತೊಂದು ಪ್ರಹಾರ ನೀಡಬಹುದು ಎಂದು ವಿಶ್ಲೇಷಿಸಲಾಗಿದೆ.
2020ರಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಹಾಂಕಾಂಗ್ ಪೊಲೀಸರು 47 ಪ್ರಜಾಪ್ರಭುತ್ವ ಕಾರ್ಯಕರ್ತರನ್ನು ಬಂಧಿಸಿ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಇವರಲ್ಲಿ ಮೂವತ್ತೊಂದು ಆರೋಪಿಗಳು ತಪ್ಪೊಪ್ಪಿಕೊಂಡರು ಮತ್ತು ನಾಲ್ವರು ಪ್ರಾಸಿಕ್ಯೂಷನ್ ಸಾಕ್ಷಿಗಳಾಗಲು ಒಪ್ಪಿಕೊಂಡರು. ಶಿಕ್ಷೆಯ ಪ್ರಮಾಣದ ಕುರಿತ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. 3 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ನ್ಯಾಯಾಲಯದ ಮೂಲಗಳು ಹೇಳಿವೆ.
ಅಮೆರಿಕ ಹಾಗೂ ಇತರ ದೇಶಗಳು ನ್ಯಾಯಾಂಗ ವಿಚಾರಣೆ ರಾಜಕೀಯ ಪ್ರೇರಿತವೆಂದು ಟೀಕಿಸಿದ್ದು ಆರೋಪಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿವೆ. ಚೀನಾ ಜಾರಿಗೊಳಿಸಿದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಪ್ರಜಾಪ್ರಭುತ್ವವಾದಿಗಳನ್ನು ಬೆದರಿಸಿ ಬಂಧಿಸಲು ಹಾಂಕಾಂಗ್ ಅಧಿಕಾರಿಗಳು ಬಳಸುತ್ತಿರುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ ಪೆನ್ನೀ ವೋಂಗ್ ಹೇಳಿದ್ದು ತಪ್ಪಿತಸ್ಥರೆಂದು ನಿರ್ಣಯಿಸಲ್ಪಟ್ಟವರಲ್ಲಿ ಸೇರಿರುವ ಆಸ್ಟ್ರೇಲಿಯಾ ಪ್ರಜೆ ಗಾರ್ಡನ್ ಎನ್ಜಿಗೆ ಕಾನ್ಸುಲರ್ ನೆರವಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಮೆರಿಕ, ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ರಾಜತಾಂತ್ರಿಕರು ಹೈಕೋರ್ಟ್ ವಿಚಾರಣೆಯ ಸಂದರ್ಭ ಹಾಜರಿದ್ದರು.