ಹಾಂಕಾಂಗ್: ಆರು ಕಾರ್ಯರ್ತರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಬಳಕೆ
ಸಾಂದರ್ಭಿಕ ಚಿತ್ರ
ಹಾಂಕಾಂಗ್: ಬ್ರಿಟನ್ಗೆ ಸ್ವಯಂ ಗಡೀಪಾರುಗೊಂಡಿರುವ 6 ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಬಳಸುವುದಾಗಿ ಮತ್ತು ಅವರ ಪಾಸ್ಪೋರ್ಟ್ ರದ್ದುಗೊಳಿಸುವುದಾಗಿ ಹಾಂಕಾಂಗ್ನ ಭದ್ರತಾ ಏಜೆನ್ಸಿ ಬುಧವಾರ ಹೇಳಿದೆ.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೇಶದ್ರೋಹ, ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ ಅಪರಾಧಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. 6 ಮಂದಿ ಕಾರ್ಯಕರ್ತರ ವಿರುದ್ಧ ಈ ಕ್ರಮ ಅನಿವಾರ್ಯವಾಗಿದೆ ಎಂದು ಹಾಂಕಾಂಗ್ನ ಭದ್ರತಾ ವಿಭಾಗದ ಮುಖ್ಯಸ್ಥ ಕ್ರಿಸ್ ಟಾಂಗ್ ಹೇಳಿದ್ದು ಬ್ರಿಟನ್ನ ರಾಜಕಾರಣಿಗಳು, ಸಂಸ್ಥೆಗಳು ಮತ್ತು ಮಾಧ್ಯಮಗಳು ಹಾಂಕಾಂಗ್ನ ಪ್ರತಿಷ್ಠೆಗೆ ಮಸಿ ಬಳಿಯುವ ಪ್ರಯತ್ನ ನಡೆಸಿವೆ ಎಂದು ಆರೋಪಿಸಿದ್ದಾರೆ. ಕಾರ್ಯಕರ್ತರ ಪಾಸ್ಪೋರ್ಟ್ ರದ್ದುಗೊಳಿಸುವುದರಿಂದ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಮೇಲಿನ ಅಂತರಾಷ್ಟ್ರೀಯ ಒಪ್ಪಂದದಲ್ಲಿ ಖಾತರಿಪಡಿಸಲಾದ ಚಲನವಲನದ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಕ್ರಿಸ್ ಟಾಂಗ್ ` ರಾಷ್ಟ್ರೀಯ ಭದ್ರತಾ ವಿಷಯಕ್ಕೆ ಸಂಬಂಧಿಸಿದ ಪ್ರಕರಣವಾದ್ದರಿಂದ ಇದಕ್ಕೆ ವಿನಾಯಿತಿ ಇದೆ. ಇದು ಹಾಂಕಾಂಗ್ಗೆ ಮಾತ್ರವಲ್ಲ, ಎಲ್ಲಾ ನಾಗರಿಕ ಸಮಾಜಕ್ಕೂ ಅನ್ವಯಿಸುತ್ತದೆ' ಎಂದುತ್ತರಿಸಿದರು.
ನಥಾನ್ ಲಾ, ಕ್ರಿಸ್ಟೋಫರ್ ಮುಂಗ್, ಫಿನ್ ಲಾವು, ಸೈಮನ್ ಚೆಂಗ್, ಜಾನಿ ಕಚಿ ಮತ್ತು ಟೋನಿ ಚೋಯ್ರನ್ನು ಅಧಿಕಾರಿಗಳು ವಾಂಟೆಡ್ ಪಟ್ಟಿಯಲ್ಲಿ ಸೇರಿಸಿದ್ದರು. ಬಳಿಕ ಅವರು ಬ್ರಿಟನ್ಗೆ ಪರಾರಿಯಾಗಿದ್ದು ಅಲ್ಲಿ ನೆಲೆಸಿದ್ದಾರೆ. `ಈ ಕ್ರಿಮಿನಲ್ಗಳು ಬ್ರಿಟನ್ನಲ್ಲಿ ಅಡಗಿದ್ದಾರೆ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗುವ ಕೃತ್ಯವನ್ನು ಮುಂದುವರಿಸಿದ್ದಾರೆ. ತಮ್ಮ ದುಷ್ಟ ಕಾರ್ಯಕ್ಕೆ ರಕ್ಷಣೆ ಪಡೆಯಲು ಬಾಹ್ಯಶಕ್ತಿಗಳೊಂದಿಗೆ ಕೈಜೋಡಿಸಿರುವುದರಿಂದ ಕಠಿಣ ಕ್ರಮಗಳನ್ನು ಕೈಗೊಂಡು ಅವರಿಗೆ ಪಾಠ ಕಲಿಸಬೇಕಿದೆ ಎಂದು ಭದ್ರತಾ ಏಜೆನ್ಸಿ ಹೇಳಿದೆ.
ಅಮೆರಿಕ, ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ನೆಲೆಸಿರುವ ಹತ್ತಕ್ಕೂ ಅಧಿಕ ಕಾರ್ಯಕರ್ತರನ್ನು ವಾಂಟೆಡ್ ಕ್ರಿಮಿನಲ್ಗಳ ಪಟ್ಟಿಗೆ ಸೇರಿಸಿರುವ ಹಾಂಕಾಂಗ್ ಅಧಿಕಾರಿಗಳು, ಅವರ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನ ಘೋಷಿಸಿದೆ. ಈ ಕ್ರಮದಿಂದಾಗಿ ಅವರಿಗೆ ಹಣಕಾಸು ಒದಗಿಸುವುದು, ಹಾಂಕಾಂಗ್ನಲ್ಲಿ ವ್ಯಾಪಾರ ವಹಿವಾಟು ನಡೆಸುವುದನ್ನು ನಿಷೇಧಿಸಲಾಗುತ್ತದೆ.