ಗಾಝಾದಲ್ಲಿ ಯುಎಇನಿಂದ ಆಸ್ಪತ್ರೆ ಸ್ಥಾಪನೆ
Photo- PTI
ದುಬೈ: ಇಸ್ರೇಲ್ ದಾಳಿಯಿಂದ ವ್ಯಾಪಕ ಸಾವು, ನೋವಿಗೆ ಸಾಕ್ಷಿಯಾಗಿರುವ ಗಾಝಾಪಟ್ಟಿಯಲ್ಲಿ ಗಾಯಾಳುಗಳ ಚಿಕಿತ್ಸೆಗಾಗಿ ಯುಎಇ ಆಸ್ಪತ್ರೆಯೊಂದನ್ನು ಸ್ಥಾಪಿಸಲಿದೆ ಎಂದು ಹಮಾಸ್ ಆಡಳಿತದ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
150 ಹಾಸಿಗೆಯ ಸೌಲಭ್ಯವಿರುವ ಈ ಆಸ್ಪತ್ರೆಗೆ ಬೇಕಾದ ವೈದ್ಯಕೀಯ ಸಾಮಾಗ್ರಿಗಳು ಮತ್ತಿತರ ಸಲಕರಣೆಗಲಳನ್ನು ಹೊತ್ತ ಐದು ವಿಮಾನಗಳು ಅಬುಧಾಬಿಯಿಂದ ಉತ್ತರ ಈಜಿಪ್ಟ್ನ ಆರಿಶ್ಗೆ ಪ್ರಯಾಣಿಸಿದೆ.
ಆದರೆ ಗಾಝಾಗೆ ಈ ಉಪಕರಣಗಳನ್ನು ಹೇಗೆ ಸಾಗಿಸಲಾಗುವುದು ಎಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಗಾಝಾಗೆ ಈಜಿಪ್ಟ್ನ ರಫಾ ಗಡಿದಾಟುಕೇಂದ್ರದ ಮೂಲಕ ಮಾತ್ರವೇ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಯುಎಇ ಸ್ಥಾಪಿಸಲಿರುವ ಈ ಆಸ್ಪತ್ರೆಯಲ್ಲಿಅರಿವಳಿಕೆ , ಶಸ್ತ್ರಕ್ರಿಯೆ , ಸ್ತ್ರೀರೋಗ ಚಿಕಿತ್ಸೆ ಹಾಗೂ ತೀವ್ರ ನಿಗಾಘಟಕಗಳಿರುತ್ತವೆ.ಮಕ್ಕಳು ಹಾಗೂ ವಯಸ್ಕರಿಗೂ ಇಲ್ಲಿ ಚಿಕಿತ್ಸಾ ಸೌಲಭ್ಯಗಳಿವೆ ಎಂದು ಡಬ್ಲ್ಯುಎಎಂ ಸುದ್ದಿ ಏಜೆನ್ಸಿ ತಿಳಿಸಿದೆ.
ಗಾಝಾದ ಮೇಲೆ ಇಸ್ರೇಲ್ ಆಕ್ರಮಣ ಆರಂಭವಾದಾಗಿನಿಂದ ಅಲ್ಲಿದ್ದ 35 ಆಸ್ಪತ್ರೆಗಳ ಪೈಕಿ 14 ಆಸ್ಪತ್ರೆಗಳು ಕಾರ್ಯಸ್ಥಗಿತಗೊಳಿಸಿವೆ. ಅಲ್ಲದೆ ಗಾಝಾ ಪ್ರದೇಶಾದ್ಯಂತ ಇರುವ ಪ್ರಾಥಮಿಕ ಚಿಕಿತ್ಸಾ ಸೌಲಭ್ಯಗಳ ಕಟ್ಟಡ ಹಾನಿ ಹಾಗೂ ವಿದ್ಯುತ್ ಸ್ಥಗಿತದ ಹಿನ್ನೆಲೆಯಲ್ಲಿ ಮುಚ್ಚುಗಡೆಗೊಂಡಿವೆ.