ಒತ್ತೆಯಾಳು ಹಸ್ತಾಂತರದ ದೃಶ್ಯ ಆಘಾತಕಾರಿ: ನೆತನ್ಯಾಹು ಖಂಡನೆ

ಬೆಂಜಮಿನ್ ನೆತನ್ಯಾಹು | PC : PTI
ಜೆರುಸಲೇಂ: ಗಾಝಾದಲ್ಲಿ ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆ ಆಘಾತಕಾರಿ ಮತ್ತು ಭಯಾನಕವಾಗಿತ್ತು ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಂಡಿಸಿದ್ದಾರೆ.
ನಮ್ಮ ಒತ್ತೆಯಾಳುಗಳ ಬಿಡುಗಡೆಯ ಸಮಯದಲ್ಲಿ ಆಘಾತಕಾರಿ ದೃಶ್ಯವನ್ನು ಗಮನಿಸಿದ್ದೇವೆ. ಇಂತಹ ಭಯಾನಕ ದೃಶ್ಯಗಳು ಮತ್ತೆ ಮರುಕಳಿಸುವುದಿಲ್ಲ ಎಂದು ಮಧ್ಯಸ್ಥಿಕೆದಾರರು ಖಚಿತ ಪಡಿಸಬೇಕು ಮತ್ತು ನಮ್ಮ ಒತ್ತೆಯಾಳುಗಳ ಸುರಕ್ಷತೆಯನ್ನು ಖಾತರಿಪಡಿಸಬೇಕು' ಎಂದವರು ಆಗ್ರಹಿಸಿದ್ದಾರೆ. ಒತ್ತೆಯಾಳುಗಳ ಹಸ್ತಾಂತರ `ಅಸಹನೀಯ ಮತ್ತು ಆಘಾತಕಾರಿ'ಯಾಗಿತ್ತು ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಹೇಳಿದ್ದಾರೆ.
ಜಬಾಲಿಯಾದಲ್ಲಿ ರೆಡ್ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸುವುದಕ್ಕೂ ಮುನ್ನ ಇಸ್ರೇಲ್ನ ಮೂವರು ಮಹಿಳಾ ಸೈನಿಕರನ್ನು ಹಮಾಸ್ ಸದಸ್ಯರು ವೇದಿಕೆಯಲ್ಲಿ ಮೆರವಣಿಗೆ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಾಸ್ಕ್ ಧರಿಸಿದ್ದ ಹಮಾಸ್ ಸದಸ್ಯರು ಹಾಗೂ ಸ್ಥಳೀಯರ ಗುಂಪಿನ ನಡುವೆ ಇಸ್ರೇಲಿ ಒತ್ತೆಯಾಳುಗಳನ್ನು ರೆಡ್ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಿರುವ ವೀಡಿಯೊವನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.