ಪಾಕಿಸ್ತಾನದಲ್ಲಿ ಮನೆ ಕುಸಿತ: 12 ಮಂದಿ ಸಾವು
ಸಾಂದರ್ಭಿಕ ಚಿತ್ರ (PTI)
ಇಸ್ಲಮಾಬಾದ್: ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಧಾರಾಕಾರ ಮಳೆಯಿಂದಾಗಿ ಜಲಾವೃತಗೊಂಡ ಮನೆಯೊಂದು ಕುಸಿದು ಬಿದ್ದು ಮಗು, ಮೂವರು ಮಹಿಳೆಯರ ಸಹಿತ 12 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಖೈಬರ್ ಪಖ್ತೂಂಕ್ವಾದ ಪತ್ರಕ್ ಪ್ರಾಂತದಲ್ಲಿ ಮನೆಯೊಂದು ಸಂಪೂರ್ಣ ಕುಸಿದುಬಿದ್ದು ಮನೆಯಲ್ಲಿದ್ದ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ತಂಡದ ವಕ್ತಾರ ಬಿಲಾಲ್ ಫೈಜಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಗುರುವಾರ ರಾತ್ರಿಯಿಂದ ದೇಶದ ಹಲವೆಡೆ ಧಾರಕಾರಾ ಮಳೆಯಾಗುತ್ತಿದ್ದು ಶುಕ್ರವಾರ ಗುಡುಗು, ಸಿಡಿಲಿನ ಸಹಿತ ಮಳೆಯಾಗಿದೆ. ದಕ್ಷಿಣ ಕರಾವಳಿಗೆ ಚಂಡ ಮಾರುತ ಅಪ್ಪಳಿಸುವ ಸೂಚನೆಯಿದ್ದು ಗುಡುಗು ಸಹಿತ ಧಾರಾಕಾರ ಮಳೆ ಮತ್ತು ಪ್ರವಾಹದ ಸಾಧ್ಯತೆಯಿದೆ ಎಂದು ಸಿಂಧ್ ಪ್ರಾಂತದ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಜುಲೈ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿ ಮುಂಗಾರು ಆರಂಭವಾದಂದಿನಿಂದ ಮಳೆ, ಪ್ರವಾಹದಿಂದಾಗಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.