ಗಾಝಾ ಯುದ್ಧ ಪುನರಾರಂಭವಾದರೆ ಇಸ್ರೇಲ್ ಮೇಲೆ ದಾಳಿಗೆ ಸಿದ್ಧ: ಹೌದಿಗಳ ಎಚ್ಚರಿಕೆ

Photo: PTI
ಸನಾ: ಹಮಾಸ್ ನೊಂದಿಗಿನ ಕದನ ವಿರಾಮ ಒಪ್ಪಂದವನ್ನು ಗೌರವಿಸದಿದ್ದರೆ ಮತ್ತು ಗಾಝಾದ ಮೇಲೆ ದಾಳಿ ಪುನರಾರಂಭಿಸಿದರೆ ಇಸ್ರೇಲ್ ಮೇಲೆ ದಾಳಿ ನಡೆಸಲು ಸಿದ್ಧ ಎಂದು ಯೆಮನ್ ನ ಹೌದಿಗಳು ಘೋಷಿಸಿದ್ದಾರೆ.
ಗಾಝಾದಲ್ಲಿ ಮತ್ತೆ ಸಂಘರ್ಷ ಪುನರಾರಂಭಗೊಂಡರೆ ಮಿಲಿಟರಿ ಕಾರ್ಯಾಚರಣೆಯ ಮೂಲಕ ಉತ್ತರಿಸಲು ಹಮಾಸ್ ಸಿದ್ಧವಿದೆ. ನಮ್ಮ ಕೈಗಳು ಬಂದೂಕಿನ ಟ್ರಿಗರ್ ಮೇಲಿದೆ ಎಂದು ಹಮಾಸ್ ನಾಯಕ ಅಬ್ದೆಲ್ ಮಲಿಕ್ ಅಲ್-ಹೌದಿ ಮಂಗಳವಾರ ಘೋಷಿಸಿದ್ದಾರೆ.
ರಾಜಧಾನಿ ಸನಾ ಸೇರಿದಂತೆ ಪಶ್ಚಿಮ ಯೆಮನ್ ನ ಬಹುತೇಕ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಿರುವ ಹೌದಿಗಳು ಗಾಝಾ ಯುದ್ಧದ ಸಂದರ್ಭ ಪೆಲೆಸ್ತೀನೀಯರನ್ನು ಬೆಂಬಲಿಸಿ ಇಸ್ರೇಲ್ ವಿರುದ್ಧ ದಾಳಿ ನಡೆಸಿತ್ತು. 2023ರ ನವೆಂಬರ್ ನಿಂದ ಹೌದಿಗಳು ಕೆಂಪು ಸಮುದ್ರದಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿ 100ಕ್ಕೂ ಹೆಚ್ಚು ದಾಳಿಗಳನ್ನು ಹಾಗೂ ಇಸ್ರೇಲ್ನತ್ತ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದರು.
ಕಳೆದ ತಿಂಗಳು ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ದಾಳಿಗಳನ್ನು ಸೀಮಿತಗೊಳಿಸುವುದಾಗಿ ಹೌದಿ ಗುಂಪು ಹೇಳಿಕೆ ನೀಡಿತ್ತು.
ಆದರೆ ಇಸ್ರೇಲ್ ಕದನ ವಿರಾಮ ಒಪ್ಪಂದದ ಅಂಶಗಳನ್ನು ಪದೇ ಪದೇ ಉಲ್ಲಂಘಿಸುತ್ತಿದೆ. ಗಾಯಗೊಂಡವರು ಚಿಕಿತ್ಸೆಗಾಗಿ ಗಾಝಾದಿಂದ ನಿರ್ಗಮಿಸಲು ಮತ್ತು ಗಾಝಾ ಪಟ್ಟಿಗೆ ಅಗತ್ಯದ ನೆರವು ಪೂರೈಕೆಗೆ ಇಸ್ರೇಲಿ ಸೇನೆ ಅವಕಾಶ ನಿರಾಕರಿಸುತ್ತಿರುವುದರಿಂದ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುವುದಾಗಿ ಹಮಾಸ್ ಹೇಳಿದೆ.