ಅಮೆರಿಕ ಯಾವ ದೇಶಗಳ ಮೇಲೆ ಎಷ್ಟು ಸುಂಕ ವಿಧಿಸಿದೆ? ಇಲ್ಲಿದೆ ಸಮಗ್ರ ಪಟ್ಟಿ

PC: x.com/BowesChay
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಪ್ರಮುಖ ವ್ಯಾಪಾರ ಪಾಲುದಾರ ದೇಶಗಳಾದ ಭಾರತ, ಚೀನಾ ಮತ್ತು ಯೂರೋಪಿಯನ್ ಒಕ್ಕೂಟ ಸೇರಿದಂತೆ ವಿವಿಧ ದೇಶಗಳ ಮೇಲೆ ಸುಂಕ ವಿಧಿಸುವ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಗರಿಷ್ಠ ಎಂದರೆ ಕಾಂಬೋಡಿಯಾದಿಂದ ಆಮದಾಗುವ ಸರಕುಗಳ ಮೇಲೆ ಶೇಕಡ 49ರಷ್ಟು ಸುಂಕ ವಿಧಿಸಿದ್ದಾರೆ.
ಶ್ವೇತಭವನದ ರೋಸ್ ಗಾರ್ಡನ್ ನಲ್ಲಿ ಮಾಡಿದ ಭಾಷಣದಲ್ಲಿ ಅಂತಿಮವಾಗಿ "ಅಮೆರಿಕ ಮೊದಲು" ಎಂಬ ನಿಲುವನ್ನು ಸ್ಪಷ್ಟಪಡಿಸಿದರು. "ಇಂದು ನಾವು ಅಮೆರಿಕದ ಕಾರ್ಮಿಕರ ಪರವಾಗಿ ನಿಲ್ಲುತ್ತಿದ್ದೇವೆ ಹಾಗೂ ಅಂತಿಮವಾಗಿ "ಅಮೆರಿಕವನ್ನು ಪ್ರಥಮ" ಸ್ಥಾನದಲ್ಲಿ ನಿಲ್ಲಿಸುತ್ತಿದ್ದೇವೆ. ನಾವು ನಿಜವಾಗಿಯು ಶ್ರೀಮಂತರಾಗಬಹುದು. ಎಷ್ಟು ಶ್ರೀಮಂತರಾಗಬಹುದೆಂದರೆ ಯಾವುದೇ ದೇಶಗಳಿಗಿಂತ ಶ್ರೀಮಂತರಾಗಬಹುದು; ಅದನ್ನು ನಂಬಲೂ ಸಾಧ್ಯವಿಲ್ಲ; ನಾವು ಸ್ಮಾರ್ಟ್ ಆಗುತ್ತಿದ್ದೇವೆ" ಎಂದು ಟ್ರಂಪ್ ಹೇಳಿದರು.
ಅಮೆರಿಕಕ್ಕೆ ಆಮದಾಗುವ ಎಲ್ಲ ಸರಕುಗಳ ಮೇಲೆ ಕನಿಷ್ಠ ಶೇಕಡ 10ರಷ್ಟು ಸುಂಕ ವಿಧಿಸಲಾಗುತ್ತಿದೆ. ಪಟ್ಟಿಯಲ್ಲಿ ಪ್ರದರ್ಶಿಸುವ ದೇಶಗಳಿಗೆ ಅಧಿಕ ತೆರಿಗೆ ವಿಧಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಹಲವು ಪ್ರಕರಣಗಳಲ್ಲಿ ಮಿತ್ರದೇಶಗಳು ವ್ಯಾಪಾರದಲ್ಲಿ ಶತ್ರುಗಳಿಗಿಂತಲೂ ಕೆಟ್ಟದಾಗಿವೆ ಎಂದು ಟ್ರಂಪ್ ಉಲ್ಲೇಖಿಸಿದರು.
ಪಟ್ಟಿಯ ಪ್ರಕಾರ ಅಲ್ಜೀರಿಯಾ ಮೇಲೆ ಶೇಕಡ 30ರಷ್ಟು ಸುಂಕ ವಿಧಿಸಿದರೆ ಒಮಾನ್, ಉರುಗ್ವೆ, ಬಹಮಾಸ್ ಮೇಲೆ ಶೇಕಡ 10ರಷ್ಟು ಸುಂಕ ವಿಧಿಸಲಾಗಿದೆ. ಲೆಸೊಥೊ ಗರಿಷ್ಠ ಅಂದರೆ ಶೇಕಡ 50ರ ಸುಂಕ ಎದುರಿಸಲಿದೆ. ಇಥಿಯೋಪಿಯಾ, ಘಾನಾ, ಬೊಲಿವಿಯಾ, ಪನಾಮಾ, ಕೆನ್ಯಾ, ಹೈಟಿ, ಉಕ್ರೇನ್, ಬಹರೈನ್ ಮತ್ತು ಕತಾರ್ ಶೇಕಡ 10ರಷ್ಟು ಮಾತ್ರ ಸುಂಕದ ಹೊರೆ ಅನುಭವಿಸಲಿವೆ. ಮಾರಿಷಸ್(40), ಫಿಜಿ (32), ಲಿಚ್ಟೆನ್ಸ್ಟೈನ್ (37), ಗಯಾನ (38), ಬೋಸ್ನಿಯಾ- ಹರ್ಝಗೋವಿನಾ (35), ನೈಜೀರಿಯಾ (14), ನಮೀಬಿಯಾ (21), ಬ್ರೂನಿ (24), ಉತ್ತರ ಮೆಕೆಡೋನಿಯಾ (33) ಕೂಡಾ ತೆರಿಗೆ ಹೊರೆ ಎದುರಿಸಲಿವೆ.
ಪ್ರಮುಖವಾಗಿ ಚೀನಾದ ಮೇಲೆ ಶೇಕಡ 34ರಷ್ಟು ಸುಂಕ ವಿಧಿಸಿದ್ದರೆ, ಯುರೋಪಿಯನ್ ಒಕ್ಕೂಟವು 20% ಸುಂಕವನ್ನು ಎದುರಿಸುತ್ತಿದೆ. ತೈವಾನ್, ಜಪಾನ್ ಕ್ರಮವಾಗಿ 32 ಹಾಗೂ ಶೇಕಡ 24ರಷ್ಟು ಸುಂಕ ಎದುರಿಸಲಿದ್ದರೆ, ಭಾರತ ಹಾಗೂ ದಕ್ಷಿಣ ಕೊರಿಯಾ ಕ್ರಮವಾಗಿ ಶೇಕಡ 26 ಮತ್ತು 25ರಷ್ಟು ಹೊರೆ ಅನುಭವಿಸಲಿವೆ.
LIBERATION DAY RECIPROCAL TARIFFS pic.twitter.com/ODckbUWKvO
— The White House (@WhiteHouse) April 2, 2025