ಬ್ರಿಟನ್ ನಲ್ಲಿನ ಆರ್ಥಿಕ ಹಿಂಜರಿತ | ಭಾರತೀಯ ವಿದ್ಯಾರ್ಥಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ?
Photo : freepressjournal
ಲಂಡನ್: 2023ರ ನಾಲ್ಕನೆ ತ್ರೈಮಾಸಿಕದಲ್ಲಿ ಬ್ರಿಟನ್ ನ ಜಿಡಿಪಿ ಶೇ. 0.3ರಷ್ಟು ಕುಗ್ಗಿರುವುದರಿಂದ ಬ್ರಿಟನ್ ಅಧಿಕೃತವಾಗಿ ಆರ್ಥಿಕ ಹಿಂಜರಿತಕ್ಕೆ ತಲುಪಿದೆ. ರಾಯಿಟರ್ಸ್ ವರದಿಗಳ ಪ್ರಕಾರ, ತಲಾ ವ್ಯಕ್ತಿಯ ಜಿಡಿಪಿ ಕುಗ್ಗಿರುವುದರಿಂದ ಯಾವುದೇ ಬೆಳವಣಿಗೆ ಇಲ್ಲದೆ ದೀರ್ಘಾವಧಿ ಆರ್ಥಿಕ ಹಿಂಜರಿತ ದಾಖಲಾಗಿದೆ. ಈ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಭಾರತೀಯ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕುರಿತು ಕಳವಳ ಪಡುವಂತಾಗಿದೆ. ವ್ಯಾಸಂಗ ಮುಗಿದ ನಂತರ ಉದ್ಯೋಗ ದೊರೆಯದೆ ನಮ್ಮ ವ್ಯಾಸಂಗೋತ್ತರ ಉದ್ಯೋಗ ವೀಸಾದ ಅವಧಿಯು ಮುಗಿದು ಹೋಗಬಹುದು ಎಂದು ಹಲವಾರು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಬಿಕ್ಕಟ್ಟು
ಸ್ಟರ್ಲಿಂಗ್ ವಿಶ್ವವಿದ್ಯಾಲಯದಲ್ಲಿ ಮಾಧ್ಯಮ ನಿರ್ವಹಣೆ ವಿದ್ಯಾರ್ಥಿಯಾಗಿರುವ ವೈಷ್ಣವಿ ಜಾವಲ್ಕರ್, ನಾನು ನನ್ನ ಭವಿಷ್ಯದ ಬಗ್ಗೆ ಕಳವಳಗೊಂಡಿದ್ದು, ಅರೆಕಾಲಿಕ ಉದ್ಯೋಗ ಪಡೆಯಲು ಒದ್ದಾಡುತ್ತಿದ್ದೇನೆ. ಕೇವಲ ಪೂರ್ಣಕಾಲಿಕ ಉದ್ಯೋಗ ಮಾತ್ರ ಉಳಿದಿದೆ ಎಂದು ಹೇಳುತ್ತಾರೆ. “ಬ್ರಿಟನ್ ಸರಕಾರವು ಹಾಗೂ ವಿಶ್ವವಿದ್ಯಾಲಯಗಳು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ವಿಶ್ವದರ್ಜೆಯ ಶಿಕ್ಷಣವನ್ನು ಮುಂದುವರಿಸಲು ತಮ್ಮಲ್ಲಿಗೆ ಆಹ್ವಾನಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿವೆ. ಆದರೆ, ಅವು ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವಂತೆ ಮಾಡುವ ತಮ್ಮ ಪ್ರಾಥಮಿಕ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲಗೊಂಡಿವೆ. ರೂ. 25 ಲಕ್ಷ ಸಾಲವನ್ನು ಪಡೆದಿರುವುದರಿಂದ ನಾನು ವೃತ್ತಿ ಜೀವನದಲ್ಲಿ ರಾಜಿ ಮಾಡಿಕೊಂಡಿದ್ದು, ನನ್ನ ದೈನಂದಿನ ವೆಚ್ಚಗಳಿಗಾಗಿ ಅರೆಕಾಲಿಕ ಉದ್ಯೋಗಗಳನ್ನು ಅವಲಂಬಿಸಿದ್ದೇನೆ” ಎಂದು ಅವರು ಹೇಳುತ್ತಾರೆ. “ನಾನು ಬ್ರಿಟನ್ ಗೆ ಬಂದಾಗ, ದೇಶಾದ್ಯಂತ ಇರುವ ಸುಮಾರು 34 ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಪಾವತಿ ಮತ್ತು ಉದ್ಯೋಗ ಸ್ಥಿತಿಗೆ ಸಂಬಂಧಿಸಿದಂತೆ ಮುಷ್ಕರವನ್ನು ನಡೆಸುತ್ತಿದ್ದವು. ಇದರಿಂದ, ಆದ್ಯತೆಯಾಗಿ ಪರಿಗಣಿಸಿದ್ದ ನಮ್ಮ ವ್ಯಾಸಂಗಕ್ಕೆ ಧಕ್ಕೆಯಾಯಿತು” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಪೂರೈಸುತ್ತಾರೆ ಹಾಗೂ ತಮ್ಮ ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸುವವರೆಗೂ ಅರೆಕಾಲಿಕ ಉದ್ಯೋಗಗಳನ್ನು ಮಾಡುತ್ತಾರೆ. ನಂತರ ಅವರು ಪೂರ್ಣಾವಧಿ ಉದ್ಯೋಗಗಳಿಗೆ ಪ್ರಯತ್ನಿಸುತ್ತಾರೆ. ಲಂಡನ್ ಮೂಲದ ವಿದ್ಯಾರ್ಥಿಯಾಗಿರುವ ನಿಕಿತಾ ಶಿಭಾತೆ, “ನಾವು ಸೆಪ್ಟೆಂಬರ್ ನಿಂದ ಜನವರಿ ನಡುವೆ ಭಾರತಕ್ಕೆ ಬಂದು, ನಂತರ ಮರಳಿ ಹೋಗಿ ವ್ಯಾಸಂಗೋತ್ತರ ಉದ್ಯೋಗ ವೀಸಾಗೆ ಅರ್ಜಿ ಸಲ್ಲಿಸಲು ಸಾಧ್ಯನವಿಲ್ಲ. ನಾವು ನಮ್ಮ ಪ್ರಬಂಧಗಳನ್ನು ಸಲ್ಲಿಸಿದ ನಂತರ ಏನು ಮಾಡಬೇಕು ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಾಮರ್ಶಿಸಿದ ನಂತರ, ನಾನು ಭಾರತಕ್ಕೆ ಮರಳಲು ಹಾಗೂ ಜೀವನ ವೆಚ್ಚ ಏರುತ್ತಿರುವುದರಿಂದ ಬ್ರಿಟನ್ ನಲ್ಲಿ ಉದ್ಯೋಗ ಮಾಡುವ ಯೋಜನೆಯನ್ನು ಕೈಬಿಡಲು ನಿರ್ಧರಿಸಿದೆ” ಎನ್ನುತ್ತಾರೆ. ಹಲವಾರು ವಂಚಕರು ವಿದ್ಯಾರ್ಥಿಗಳ ತಳಮಳವನ್ನು ಬಳಸಿಕೊಂಡು, ಉದ್ಯೋಗ ಕೊಡಿಸುವುದಾಗಿ ವಂಚಿಸಿ ಹಣ ಮಾಡುತ್ತಿದ್ದಾರೆ” ಎಂದೂ ಅವರು ಹೇಳುತ್ತಾರೆ.
ಇತರ ಅಂಶಗಳು
ವಿದ್ಯಾರ್ಥಿಗಳು ಎದುರಿಸುತ್ತಿರುವ ಮತ್ತೊಂದು ಸ್ವರೂಪದ ಸಮಸ್ಯೆಗಳತ್ತ ಕಾರ್ಡಿಫ್ ವಿಶ್ವವಿದ್ಯಾಲಯದ ಅಶುತೋಷ್ ಘೋರ್ಪಡೆ ಬೊಟ್ಟು ಮಾಡುತ್ತಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಆರೈಕೆ ಸೌಲಭ್ಯಗಳಿಗೆ ಶುಲ್ಕ ವಿಧಿಸಲಾಗುತ್ತಿದೆ. ಆದರೆ, ರಾಷ್ಟ್ರೀಯ ಆರೋಗ್ಯ ಸೇವೆಯು ನಿರ್ವಹಿಸುತ್ತಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಭೇಟಿಯನ್ನು ಪಡೆಯಲು ನಾವು ಆರು ತಿಂಗಳ ಕಾಲ ಕಾಯಬೇಕಿರುವುದರಿಂದ ಹಲವಾರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಭಾರತಕ್ಕೆ ಮರಳಿ ಹೋಗುತ್ತಾರೆ ಎಂದು ಅವರು ಹೇಳುತ್ತಾರೆ. ಆ ಮೂಲಕ ಬ್ರಿಟನ್ ನಲ್ಲಿ ಆರೋಗ್ಯ ಉದ್ಯಮವು ಅವನತಿ ಹೊಂದಿದೆ ಎಂದು ಸೂಚಿಸುತ್ತಾರೆ.
ಅದೇ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿನಿ ಸೌಮಿತ್ರ ಕೋಕನೆ ಪ್ರಕಾರ, ಬ್ರಿಟನ್ ನಲ್ಲಿನ ಉದ್ಯೋಗ ಮಾರುಕಟ್ಟೆಯ ಬಗ್ಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಮಗ್ರ ತಿಳಿವಳಿಕೆ ನೀಡುವುದಿಲ್ಲ ಎನ್ನುತ್ತಾರೆ. “ಪರಿಶೀಲನೆಯ ಹಂತಕ್ಕೆ ಪರಿಗಣನೆಯಾಗುವುದಕ್ಕೂ ಮುನ್ನವೇ ನಮ್ಮ ಉದ್ಯೋಗದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮಗೊಂದು ಅವಕಾಶ ಪಡೆಯಲು ಹೋರಾಡುತ್ತಿರುವ ಹೊತ್ತಿನಲ್ಲಿ ಆರ್ಥಿಕ ಹಿಂಜರಿತವು ಉದ್ಯೋಗ ಮಾರುಕಟ್ಟೆಯನ್ನು ಮತ್ತಷ್ಟು ಚಿಂತಾಜನಕಗೊಳಿಸಿದೆ” ಎನ್ನುತ್ತಾರವರು.
ಬ್ರಿಟನ್ ನಲ್ಲಿ ಏರುತ್ತಿರುವ ಜೀವನ ವೆಚ್ಚ ಹಾಗೂ ಕೆಲಸದ ಒತ್ತಡದ ಕಾರಣಕ್ಕೆ ಒಂದು ವರ್ಗದ ವಿದ್ಯಾರ್ಥಿಗಳು ಪ್ರಾಯೋಜಕತ್ವವನ್ನು ಪಡೆಯುವ ಯೋಜನೆಯನ್ನು ಕೈಬಿಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಕಳೆದ ಎರಡು ವರ್ಷಗಳಿಂದ ಉದ್ಯೋಗ ಮಾಡುತ್ತಿರುವ ಮಿಹಿಕಾ ಬಾಕ್ರೆ, ಪ್ರಾಯೋಜಕತ್ವದ ಮೂಲಕ ವೀಸಾ ಅವಧಿಯನ್ನು ವಿಸ್ತರಿಸಲು ಯಾವುದೇ ಆಸಕ್ತಿಯನ್ನು ತೋರುತ್ತಿಲ್ಲ. “ಭಾರತದಲ್ಲಿ ನಾನು ಹಲವಾರು ಸಂಗತಿಗಳನ್ನು ಕಳೆದುಕೊಂಡಿರಬಹುದು. ಆದರೆ, ಬ್ರಿಟನ್ ನ ಭವಿಷ್ಯವನ್ನು ಪರಿಗಣಿಸಿ ನಿರ್ಧಾರಗಳನ್ನು ಕೈಗೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಅಂತಾರಾಷ್ಟ್ರೀಯ ನಿವಾಸಿಗಳಲ್ಲಿ ಉದ್ಯೋಗ ಅಭದ್ರತೆ ಸ್ಥಿರವಾಗಿ ಏರಿಕೆಯಾಗುತ್ತಿದೆ” ಎಂದು ಅವರು ಹೇಳುತ್ತಾರೆ.
ಸೌಜನ್ಯ: thehindu.com