ಅಫ್ಘಾನ್ ನಲ್ಲಿ ಮಾನವೀಯ ಬಿಕ್ಕಟ್ಟು: ತುರ್ತು ನೆರವಿಗೆ ವಿಶ್ವಸಂಸ್ಥೆ ಆಗ್ರಹ
Photo: ndtv
ಜಿನೆವಾ: ಅಫ್ಘಾನ್ ನಲ್ಲಿನ ಮಾನವೀಯ ಬಿಕ್ಕಟ್ಟಿನ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಸ್ತಾವಿಸಲಾಗಿದ್ದು, ಆ ದೇಶಕ್ಕೆ ತುರ್ತು ನೆರವು ಒದಗಿಸಬೇಕಾಗಿದೆ ಎಂದು ವಿವಿಧ ದೇಶಗಳ ಪ್ರತಿನಿಧಿಗಳು ಆಗ್ರಹಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರ ನಡೆದ ಭದ್ರತಾ ಮಂಡಳಿ ಸಭೆಯಲ್ಲಿ ರಶ್ಯ, ಬ್ರಿಟನ್, ಭಾರತ, ಖತರ್, ಸ್ವಿಝರ್ಲ್ಯಾಂಡ್, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಅಫ್ಘಾನ್ನಲ್ಲಿನ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಉಲ್ಲೇಖಿಸಿ ಆ ದೇಶದಲ್ಲಿ ನೆರವನ್ನು ಎದುರು ನೋಡುತ್ತಿರುವವರ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ. `ಶಾಂತಿಗಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಹೊಸ ಕಾರ್ಯಸೂಚಿಯು ಬಹುಪಕ್ಷೀಯ ಸಹಯೋಗವನ್ನು ಪುನರುಜ್ಜೀವನಗೊಳಿಸಲು ಮತ್ತು ಅಫ್ಘಾನ್ನಂತಹ ದೇಶಗಳಲ್ಲಿ ತಮ್ಮ ಮಕ್ಕಳನ್ನು ಮಾರಾಟ ಮಾಡುವುದು ಅಥವಾ ಉಪವಾಸ ಇರುವುದು ಈ ಎರಡರ ನಡುವೆ ಆಯ್ಕೆ ಮಾಡಬೇಕಾದ ಪರಿಸ್ಥಿತಿಯಲ್ಲಿರುವ ಮಹಿಳೆಯರ ಬಗ್ಗೆ ಹೆಚ್ಚಿನ ಗಮನ ನೀಡಿದೆ' ಎಂದು ವಿಶ್ವಸಂಸ್ಥೆಯಲ್ಲಿ ಬ್ರಿಟನ್ ನ ಪ್ರತಿನಿಧಿ ಬಾರ್ಬರಾ ವುಡ್ವರ್ಡ್ ಸಭೆಯಲ್ಲಿ ಹೇಳಿದರು. ಬಳಿಕ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ರಶ್ಯದ ಪ್ರತಿನಿಧಿ ಡಿಮಿಟ್ರಿ ಪೊಲ್ಯಾಂಸ್ಕಿ, ಅಫ್ಘಾನ್ನಲ್ಲಿ ಆಹಾರ ಬಿಕ್ಕಟ್ಟು ಉಲ್ಬಣಿಸಲು ಅಮೆರಿಕ ಮತ್ತದರ ಮಿತ್ರದೇಶಗಳು ಕಾರಣವಾಗಿವೆ ಎಂದು ದೂಷಿಸಿದರು. `ತೀವ್ರ ಸಂಪ್ರದಾಯವಾದಿ ದೇಶವಾದ ಅಫ್ಘಾನಿಸ್ತಾನವನ್ನು ಪಾಶ್ಚಿಮಾತ್ಯ ಶೈಲಿಯಲ್ಲಿ ಪ್ರಜಾಪ್ರಭುತ್ವಗೊಳಿಸಲು ಅಮೆರಿಕ ನೇತೃತ್ವದ ಮಿತ್ರದೇಶಗಳು ನಡೆಸಿದ ಪ್ರಯೋಗಗಳಿಂದಾಗಿ ಅಫ್ಘಾನಿಸ್ತಾನವು ಕಳೆದ 20 ವರ್ಷಗಳಿಂದ ಹಸಿವು ಮತ್ತು ಬಡತನದ ಪ್ರಪಾತದಿಂದ ಹೊರಬರಲು ಹೆಣಗಾಡುತ್ತಿದೆ' ಎಂದವರು ಟೀಕಿಸಿದರು.
`ಅಫ್ಘಾನ್ನ 1.53 ಕೋಟಿ ಜನತೆ ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ. ಅಫ್ಘಾನ್ನಲ್ಲಿ ಮಾನವೀಯ ನೆರವಿನ ಅಗತ್ಯವಿರುವ 29 ದಶಲಕ್ಷ ಜನರಿಗೆ ಪಾಕಿಸ್ತಾನದ ನೆರವು ಮುಂದುವರಿಯಲಿದೆ' ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಅಮೀರ್ಖಾನ್ ಹೇಳಿದರು.
ಭೀಕರ ಮಾನವೀಯ ಬಿಕ್ಕಟ್ಟಿನ ನಡುವೆಯೇ , ತಾಲಿಬಾನ್ ಆಡಳಿತವು ಜಾರಿಗೊಳಿಸಿರುವ ಕಠಿಣ ನಿರ್ಬಂಧ ನೀತಿಯು ಆರ್ಥಿಕ ಪರಿಸ್ಥಿತಿಯ ಮೇಲೆ ಮಾರಕ ಪರಿಣಾಮ ಬೀರಿದೆ . ಮಹಿಳೆಯರು ಎನ್ಜಿಒಗಳಲ್ಲಿ ಕೆಲಸ ಮಾಡುವುದಕ್ಕೆ ನಿರ್ಬಂಧ, ಮಹಿಳೆಯರ ಬ್ಯೂಟಿ ಪಾರ್ಲರ್ಗಳ ಮೇಲಿನ ನಿಷೇಧದಿಂದ 60,000ಕ್ಕೂ ಅಧಿಕ ಮಹಿಳೆಯರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವರದಿ ಹೇಳಿದೆ.