ಗಾಝಾದಲ್ಲಿ ಮಾನವೀಯ ದುರಂತ ತೆರೆದುಕೊಳ್ಳುತ್ತಿದೆ: ಚೀನಾ
ಬೀಜಿಂಗ್: ಉಲ್ಬಣಗೊಂಡಿರುವ ಇಸ್ರೇಲ್-ಹಮಾಸ್ ಯುದ್ಧವನ್ನು ಶಾಂತಗೊಳಿಸಲು ಜಗತ್ತು ತುರ್ತು ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್‍ಯಿ ಸೋಮವಾರ ಆಗ್ರಹಿಸಿದ್ದಾರೆ.
ಗಾಝಾದಲ್ಲಿ ನಡೆಯುತ್ತಿರುವ ಸಂಷರ್ಘದ ಉಲ್ಬಣವನ್ನು ತಡೆಯುವ ಉದ್ದೇಶದಿಂದ ಚೀನಾದ ಜತೆ ಮಾತುಕತೆ ನಡೆಸಲು ಬೀಜಿಂಗ್‍ಗೆ ಆಗಮಿಸಿರುವ ಫೆಲೆಸ್ತೀನಿಯನ್ ಪ್ರಾಧಿಕಾರ, ಇಂಡೊನೇಶ್ಯಾ, ಸೌದಿ ಅರೆಬಿಯಾ, ಈಜಿಪ್ಟ್ ಮತ್ತು ಜೋರ್ಡನ್ ದೇಶಗಳ ವಿದೇಶಾಂಗ ಸಚಿವರ ನಿಯೋಗದ ಜತೆಗಿನ ಸಭೆಯ ಬಳಿಕ ವಾಂಗ್‍ಯಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಗಾಝಾದಲ್ಲಿನ ಪರಿಸ್ಥಿತಿ ವಿಶ್ವದಾದ್ಯಂತದ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಸರಿ ಮತ್ತು ತಪ್ಪು ಹಾಗೂ ಮಾನವೀಯತೆಯ ತಳಹದಿಯ ಮಾನವಪ್ರಜ್ಞೆಯನ್ನು ಪ್ರಶ್ನಿಸುತ್ತದೆ. ಗಾಝಾದಲ್ಲಿ ಮಾನವೀಯ ದುರಂತ ತೆರೆದುಕೊಳ್ಳುತ್ತಿದೆ. ಈ ದುರಂತವನ್ನು ಹರಡದಂತೆ ತಡೆಯಲು ಅಂತರಾಷ್ಟ್ರೀಯ ಸಮುದಾಯ ತುರ್ತು ಕಾರ್ಯನಿರ್ವಹಿಸಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ಚೀನಾ ಐತಿಹಾಸಿಕವಾಗಿ ಫೆಲೆಸ್ತೀನೀಯರ ಬಗ್ಗೆ ಸಹಾನುಭೂತಿ ಹೊಂದಿದೆ ಮತ್ತು ಇಸ್ರೇಲಿ-ಫೆಲೆಸ್ತೀನ್ ಸಂಘರ್ಷಕ್ಕೆ ಎರಡು ದೇಶ ಪರಿಹಾರವನ್ನು ಬೆಂಬಲಿಸುತ್ತಿದೆ.