ನೂರಾರು ವಲಸಿಗರು ಅಮೆರಿಕದಿಂದ ಎಲ್ ಸಲ್ವಡೋರ್ ಗೆ ಗಡೀಪಾರು ; ನ್ಯಾಯಾಧೀಶರ ತಡೆಯಾಜ್ಞೆಯ ನಡುವೆಯೇ ಟ್ರಂಪ್ ಆಡಳಿತದ ಕ್ರಮ

Photo: NDTV
ವಾಷಿಂಗ್ಟನ್: ಗಡೀಪಾರು ಮಾಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಆದೇಶವನ್ನು ಫೆಡರಲ್ ನ್ಯಾಯಾಧೀಶರು ಹೊರಡಿಸಿದ್ದರೂ ಸಹ ಡೊನಾಲ್ಡ್ ಟ್ರಂಪ್ ಆಡಳಿತ ಸುಮಾರು ಮುನ್ನೂರು ವಲಸಿಗರನ್ನು ಎಲ್ಸಲ್ವಡಾರ್ ಗೆ ಗಡೀಪಾರು ಮಾಡಿದ್ದು ಅಲ್ಲಿ ಅವರನ್ನು ಬಿಗಿ ಭದ್ರತೆಯ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ವೆನೆಝುವೆಲಾದ ಕ್ರಿಮಿನಲ್ ಗ್ಯಾಂಗ್ ಸದಸ್ಯರನ್ನು ಗುರಿಯಾಗಿಸಿಕೊಂಡು ರೂಪಿಸಲಾದ 18ನೇ ಶತಮಾನದ ಯುದ್ಧಕಾಲದ ಘೋಷಣೆಯಡಿಯಲ್ಲಿ ಗಡೀಪಾರು ಮಾಡಲಾಗಿದೆ. ನ್ಯಾಯಾಧೀಶರ ತಡೆಯಾಜ್ಞೆಯ ಆದೇಶ ತಲುಪಿದಾಗ ವಲಸಿಗರಿದ್ದ ವಿಮಾನ ಆಕಾಶದಲ್ಲಿ ಪ್ರಯಾಣಿಸುತ್ತಿತ್ತು ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ವೆನೆಝುವೆಲಾದ ಕುಖ್ಯಾತ ಟ್ರೆಂಡೆ ಅರಗುವ ಗ್ಯಾಂಗ್ನ ಸದಸ್ಯರೆಂದು ಟ್ರಂಪ್ ಆಡಳಿತ ಗುರುತಿಸಿರುವ 300 ವಲಸಿಗರನ್ನು ಕರೆಸಿಕೊಳ್ಳಲು ಎಲ್ ಸಲ್ವಡೋರ್ ಸಮ್ಮತಿಸಿದೆ. ಕಳೆದ ಕೆಲ ವರ್ಷಗಳಿಂದ ವೆನೆಝುವೆಲಾದ ರಾಷ್ಟ್ರೀಯ ಮತ್ತು ಸ್ಥಳೀಯ ಅಧಿಕಾರಿಗಳು ತಮ್ಮ ಭೂಭಾಗದ ಮೇಲಿನ ನಿಯಂತ್ರಣವನ್ನು ಕ್ರಿಮಿನಲ್ ಗ್ಯಾಂಗ್ಗಳ ನಿಯಂತ್ರಣಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ಟ್ರಂಪ್ ಕೆಲ ದಿನಗಳ ಹಿಂದೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದರು.
ವಾಷಿಂಗ್ಟನ್ ನ ಫೆಡರಲ್ ನ್ಯಾಯಾಧೀಶರು ಅನ್ಯ ಶತ್ರುಗಳ ಕಾಯ್ದೆಯ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ. ಗಡೀಪಾರಿಗೆ ತಡೆಯಾಜ್ಞೆ ನೀಡುವ ಆದೇಶವನ್ನು ಶನಿವಾರ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ಇ. ಬೋಸ್ಬರ್ಗ್ ಜಾರಿಗೊಳಿಸಿದ್ದರು. ಆದರೆ ವಲಸಿಗರಿರುವ ಎರಡು ವಿಮಾನಗಳು ಈಗಾಗಲೇ ಪ್ರಯಾಣ ಬೆಳೆಸಿವೆ(ಒಂದು ಎಲ್ ಸಲ್ವಡೋರ್ ಗೆ, ಮತ್ತೊಂದು ಹೊಂಡುರಾಸ್ಗೆ) ಎಂದು ಸರ್ಕಾರದ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರು. ಆಗ ನ್ಯಾಯಾಧೀಶರು ತಕ್ಷಣ ವಿಮಾನವನ್ನು ಅಮೆರಿಕದತ್ತ ಹಿಂತಿರುಗಿಸಲು ಮೌಖಿಕ ಆದೇಶ ನೀಡಿದರು. ಆದರೆ ಲಿಖಿತ ಆದೇಶದಲ್ಲಿ ಈ ಸೂಚನೆ ಇರದಿದ್ದ ಕಾರಣ ಮೌಖಿಕ ಆದೇಶ ಕಾರ್ಯಗತಗೊಳ್ಳಲಿಲ್ಲ ಎಂದು ವರದಿಯಾಗಿದೆ.
`ಅಯ್ಯೋ.. ತುಂಬಾ ತಡವಾಯಿತು' ಎಂದು ನ್ಯಾಯಾಧೀಶರ ಆದೇಶವನ್ನು ಉಲ್ಲೇಖಿಸಿ ಸಲ್ವಡೋರ್ ಅಧ್ಯಕ್ಷ ಬುಕಲೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು ಇದನ್ನು ಶ್ವೇತಭವನದ ಸಂವಹನ ವಿಭಾಗದ ನಿರ್ದೇಶಕ ಸ್ಟೀವನ್ ಚೆಯುಂಗ್ ಶೇರ್ ಮಾಡಿದ್ದಾರೆ. ಎಲ್ ಸಲ್ವಡೋರ್ನ ಜೈಲಿನಲ್ಲಿ ಇರಲು ವಲಸಿಗರಿಗೆ ಒಂದು ವರ್ಷ ಸ್ಥಳಾವಕಾಶ ನೀಡಿದರೆ ಅಮೆರಿಕ 6 ದಶಲಕ್ಷ ಡಾಲರ್ ಆರ್ಥಿಕ ನೆರವು ಒದಗಿಸುವ ಒಪ್ಪಂದವಾಗಿದೆ.
►ವಲಸಿಗರಲ್ಲ, ರಾಕ್ಷಸರು: ಟ್ರಂಪ್
ವಲಸಿಗರ ಗಡೀಪಾರಿನ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಭಯಾನಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವುದಕ್ಕಾಗಿ ಎಲ್ ಸಲ್ವಡೋರ್ ನ ಅಧ್ಯಕ್ಷ ನಯೀಬ್ ಬುಕೆಲೆಯವರನ್ನು ಅಭಿನಂದಿಸಿದ್ದಾರೆ. ` ವಂಚಕ ಜೋ ಬೈಡನ್ ಮತ್ತು ಎಡಪಂಥೀಯ ಡೆಮಾಕ್ರಟಿಕ್ಗಳು ನಮ್ಮ ದೇಶಕ್ಕೆ ಕಳುಹಿಸಿದ ರಾಕ್ಷಸರು ಇವರು. ಇವರಿಗೆ ಎಷ್ಟು ಧೈರ್ಯ ಇರಬೇಡ! ಎಲ್ ಸಲ್ವಡಾರ್ ಗೆ ಮತ್ತು ವಿಶೇಷವಾಗಿ ಅಧ್ಯಕ್ಷ ಬುಕೆಲೆಗೆ ಧನ್ಯವಾದಗಳು. ಅಸಮರ್ಥ ಡೆಮಾಕ್ರಟಿಕ್ ನಾಯಕತ್ವದಿಂದಾಗಿ ನಮ್ಮ ದೇಶಕ್ಕೆ ಎದುರಾಗಿದ್ದ ಭಯಾನಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವುದಕ್ಕೆ ನಿಮಗೆ ಧನ್ಯವಾದಗಳು. ಇದನ್ನು ನಾವು ಮರೆಯುವುದಿಲ್ಲ' ಎಂದು ಟ್ರಂಪ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು ವಲಸಿಗರು ಎಲ್ ಸಲ್ವಡೋರ್ ನ ಜೈಲಿಗೆ ಗಡೀಪಾರು ಆಗುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.