ಭಾರತದ ಜತೆಗಿನ ಹೈಡ್ರೋಗ್ರಾಫಿಕ್ ಸರ್ವೆ ಒಪ್ಪಂದ ನವೀಕರಿಸುವುದಿಲ್ಲ : ಮಾಲ್ದೀವ್ಸ್ ಘೋಷಣೆ
ಮುಹಮ್ಮದ್ ಮುಯಿಝ್ಝ (Photo: X/ @MMuizzu)
ಮಾಲೆ: ಹೈಡ್ರೋಗ್ರಾಫಿಕ್ ಸರ್ವೆ(ಜಲಸಂಪನ್ಮೂಲ ಸರ್ವೆ)ಗೆ ಸಂಬಂಧಿಸಿ ಭಾರತದ ಜತೆಗಿನ ಒಪ್ಪಂದವನ್ನು ನವೀಕರಿಸುವುದಿಲ್ಲ. ಈ ಸರ್ವೆಯನ್ನು ನಾವೇ ನಡೆಸಲು ಅಗತ್ಯವಿರುವ ವ್ಯವಸ್ಥೆಗಳು ಹಾಗೂ ಯಂತ್ರೋಪಕರಣಗಳನ್ನು ಖರೀದಿಸುವ ಯೋಜನೆಯಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝ ಘೋಷಿಸಿದ್ದಾರೆ.
ಮಾಲ್ದೀವ್ಸ್ ವಿಶೇಷ ಆರ್ಥಿಕ ವಲಯದ(ಇಇಝಡ್) ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಈ ತಿಂಗಳು ಮಾಲ್ದೀವ್ಸ್ ನ ಜಲವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.
ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಲು ಉಚಿತ ಮಿಲಿಟರಿ ನೆರವು ಸೇರಿದಂತೆ ಮಾಲ್ದೀವ್ಸ್ ನೊಂದಿಗೆ ಚೀನಾ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಸೋಮವಾರ ಮಾಲೆ ಬಳಿಯ ದ್ವೀಪಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಮುಯಿಝ್ಝ `ನಾವೇ ಸ್ವತಃ ಹೈಡ್ರೋಗ್ರಾಫಿಕ್ಸ್ ಸರ್ವೆ ನಡೆಸಲು ಅಗತ್ಯವಿರುವ ವ್ಯವಸ್ಥೆಗಳನ್ನು ಪಡೆಯಲು ರಕ್ಷಣಾ ಇಲಾಖೆ ಪ್ರಯತ್ನಿಸುತ್ತಿದೆ. ನಾವೇ ಸರ್ವೆ ನಡೆಸಿದರೆ, ನಮ್ಮ ನೀರೊಳಗಿನ ವೈಶಿಷ್ಟ್ಯಗಳ ಸಂಪೂರ್ಣ ಒಳನೋಟವನ್ನು ಪಡೆದುಕೊಳ್ಳುತ್ತೇವೆ ಮತ್ತು ಚಾರ್ಟ್ಗಳನ್ನು ಸಿದ್ಧಪಡಿಸಿಕೊಳ್ಳಬಹುದು' ಎಂದರು.
ಮಾಲ್ದೀವ್ಸ್ ನ ಕಡಲಾಳದ ವೈಶಿಷ್ಟ್ಯಗಳ ಸರ್ವೆ ನಡೆಸಲು ಮಾಲ್ದೀವ್ಸ್ ನ ಆಗಿನ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸಾಹಿಲ್ ಭಾರತ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು.
`ನಮ್ಮ ನೀರೊಳಗಿನ ಎಲ್ಲಾ ಒಳನೋಟಗಳನ್ನು ಸ್ಕ್ಯಾನ್ ಮಾಡಲು ಮತ್ತು ಪಡೆದುಕೊಳ್ಳಲು ಭಾರತ ಸರಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ನವೀಕರಿಸದಿರಲು ನಾವು ನಿರ್ಧರಿಸಿದ್ದೇವೆ. ಈ ನೀರೊಳಗಿನ ವಿವರಗಳು ನಮ್ಮ ಆಸ್ತಿ, ನಮ್ಮ ಪರಂಪರೆಯಾಗಿದೆ ಎಂದ ಮುಯಿಝ್ಝು, ಈ ಹಿಂದೆ ಇಂತಹ ನಕ್ಷೆಗಳು ಹಾಗೂ ಅಂಕಿಅಂಶಗಳನ್ನು ನಾವು ಭಾರತದಿಂದ ಖರೀದಿಸಬೇಕಿತ್ತು ಎಂದರು.
ಮಾಲ್ದೀವ್ಸ್ನ ಈ ಹಿಂದಿನ ಸರಕಾರ ಭಾರತದೊಂದಿಗೆ ಮಾಡಿಕೊಂಡಿರುವ 100ಕ್ಕೂ ಅಧಿಕ ಒಪ್ಪಂದಗಳನ್ನು ತಮ್ಮ ಸರಕಾರ ಮರುಪರಿಶೀಲಿಸಲಿದೆ ಎಂದು ಮುಯಿಝ್ಝು ಸರಕಾರ ಈಗಾಗಲೇ ಹೇಳಿದೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಲ್ದೀವ್ಸ್ ಗೆ ಭೇಟಿ ನೀಡಿದ ಸಂದರ್ಭ ಒಪ್ಪಂದದ ಪ್ರಕಾರ 2021ರ ಜನವರಿಯಲ್ಲಿ ಭಾರತ-ಮಾಲ್ದೀವ್ಸ್ ಜಂಟಿಯಾಗಿ ಹೈಡ್ರೋಗ್ರಾಫಿಕ್ ಸರ್ವೆ ನಡೆಸಿದ್ದವು.
ಈ ಮಧ್ಯೆ, ಮಾಲ್ದೀವ್ಸ್ ಜಲವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆಯನ್ನು ಸ್ಥಾಪಿಸುವ ಕಾರ್ಯ ಇದೇ ತಿಂಗಳು ಆರಂಭಗೊಳ್ಳಲಿದೆ. ಮಾಲ್ದೀವ್ಸ್ ನಲ್ಲಿ ಭೂಪ್ರದೇಶಕ್ಕಿಂತ ಜಲಪ್ರದೇಶ ಹೆಚ್ಚಿದೆ. ಆದರೆ ಮಾಲ್ದೀವ್ಸ್ ಗೆ ತನ್ನ ವಿಶೇಷ ಆರ್ಥಿಕ ವಲಯದ ಮೇಲೆ ನಿಯಂತ್ರಣವಿಲ್ಲ. ವಿಶೇಷ ಆರ್ಥಿಕ ವಲಯ ನಮ್ಮ ಪ್ರದೇಶದ ಭಾಗವಾಗಿದ್ದರೂ ಈ ಪ್ರದೇಶವನ್ನು ಮೇಲ್ವಿಚಾರಣೆ ನಡೆಸುವ ಸಾಮರ್ಥ್ಯ ನಮ್ಮಲ್ಲಿಲ್ಲ. ದೇವರ ಇಚ್ಛೆಯಂತೆ ಈ ಕಾರ್ಯಕ್ಕೆ ಮಾರ್ಚ್ನಲ್ಲಿ ಚಾಲನೆ ದೊರಕಲಿದೆ ಎಂದು ಮಾಲ್ದೀವ್ಸ್ ಸರಕಾರ ಹೇಳಿದೆ.