ಟ್ರಂಪ್ ಗೆದ್ದಲ್ಲಿ ಅಮೆರಿಕ ಸರ್ವಾಧಿಕಾರಿಯ ಪಾಲಾಗಲಿದೆ : ಕಮಲಾ ಹ್ಯಾರಿಸ್ ಎಚ್ಚರಿಕೆ
ಕಮಲಾ ಹ್ಯಾರಿಸ್ | PC : NDTV
ವಾಶಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಅಧ್ಯಕ್ಷ ಜೋ ಬೈಡನ್ ಅವರಿಗೆ ತನ್ನ ಬೆಂಬಲವನ್ನು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಂಗಳವಾರ ಪುನರುಚ್ಚರಿಸಿದ್ದಾರೆ. ಬೈಡೆನ್ ಓರ್ವ ‘ಹೋರಾಟಗಾರ’ನೆಂದು ಆಕೆ ಬಣ್ಣಿಸಿದ್ದಾರೆ. ಬೈಡನ್ ಅವರ ಎದುರಾಳಿಯಾದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾದಲ್ಲಿ ಅವರು ಅಮೆರಿಕವನ್ನು ಸರ್ವಾಧಿಕಾರದೆಡೆಗೆ ಕೊಂಡೊಯ್ಯಲಿದ್ದಾರೆಂದು ಎಚ್ಚರಿಕೆ ನೀಡಿದ್ದಾರೆ.
ಬೈಡೆನ್ ಅವರ ಇಳಿವಯಸ್ಸು ಹಾಗೂ ದೇಶವನ್ನು ಮುನ್ನಡೆಸುವಲ್ಲಿ ಅವರ ಸಾಮರ್ಥ್ಯದ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಕಮಲಾ ಅವರು ‘‘ ಈ ಚುನಾವಣೆಯು ಕಠಿಣವಾಗಲಿದೆಯೆಂದು ನಮಗೆಲ್ಲರಿಗೂ ತಿಳಿದಿದೆ. ಅಮೆರಿಕದ ಅಧ್ಯಕ್ಷಖೀಯ ಚುನಾವಣೆಗೆ ಸ್ಪರ್ಧಿಸುವುದು ಸುಲಭವಲ್ಲವೆಂಬುದು ಕಳೆದ ಕೆಲವು ದಿನಳ ಅನುಭವಗಳು ನಮಗೆ ಮನವರಿಕೆ ಮಾಡಿಕೊಟ್ಟಿವೆ ಎಂದರು.
ಆದರೆ ಒಂದು ವಿಷಯ ಮಾತ್ರ ನಮಗೆ ಚೆನ್ನಾಗಿ ಗೊತ್ತಿದೆ. ಬೈಡೆನ್ ಓರ್ವ ಹೋರಾಟಗಾರ. ಒಂದು ವೇಳೆ ನೀವು ಅವರನ್ನು ಉರುಳಿಸಿದ್ದಲ್ಲಿ, ನಿಮಗೆ ಎದಿರೇಟು ದೊರೆಯಲಿದೆ’’ ಎಂದು ಆಕೆ ಹೇಳಿದರು.
ಅಮೆರಿಕದ ಮತದಾರರು ಈ ಬಾರಿ ಅವರ ಜೀವಮಾನದಲ್ಲೇ ಅತ್ಯಂತ ಪರಿಣಾಮಕಾರಿ ಹಾಗೂ ಮಹತ್ವದ ಚುನಾವಣೆಯನ್ನು ಎದುರಿಸುತ್ತಿದ್ದಾರೆಂದು ಹ್ಯಾರಿಸ್ ಹೇಳಿದ್ದಾರೆ.
ಟ್ರಂಪ್ ಅವರು ನಿರಂತರವಾಗಿ ಮೂಲನಿವಾಸಿ ಅಮೆರಿಕನ್ನರು,ಮೂಲ ನಿವಾಸಿ ಹವಾಯಿ ನಾಗರಿಕರು ಹಾಗೂ ಪೆಸಿಫಿಕ್ ದ್ವೀಪಗಳಲ್ಲಿನ ಸಮುದಾಯಗಳ ಬಗ್ಗೆ ದ್ವೇಷವನ್ನು ಕೆರಳಿಸುತ್ತಿದ್ದಾರೆಂದು ಕಮಲಾ ಹೇಳಿದರು. ವಲಸಿಗರನ್ನು ಖಳರನ್ನಾಗಿ ಬಿಂಬಿಸುವ, ಜನಾಂಗೀಯವಾದವನ್ನು ಉತ್ತೇಜಿಸುವ, ದ್ವೇಷವನ್ನು ಕೆರಳಿಸುವ ವ್ಯಕ್ತಿಗೆ ಮೈಕ್ರೋಫೋನ್ ಹಿಂದೆ ನಿಲ್ಲಲು ಅವಕಾಶ ನೀಡಕೂಡದು ಎಂದು ಹ್ಯಾರಿಸ್ ಅವರು ಅಮೆರಿಕದ ಮತದಾರರಿಗೆ ಕರೆ ನೀಡಿದರು.