ಶಸ್ತ್ರಾಸ್ತ್ರ ಕೊರತೆಯಾದರೆ ಬೆರಳಿನ ಉಗುರುಗಳಿಂದ ಹೋರಾಡುತ್ತೇವೆ : ನೆತನ್ಯಾಹು
ಬೆಂಜಮಿನ್ ನೆತನ್ಯಾಹು | PHOTO: PTI
ಟೆಲ್ಅವೀವ್: “ಅಮೆರಿಕವು ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸಿದರೆ ನಾವು ನಮ್ಮ ಬೆರಳಿನ ಉಗುರುಗಳಿಂದ ಹೋರಾಟ ಮುಂದುವರಿಸುತ್ತೇವೆ. ಗಾಝಾದಲ್ಲಿನ ಯುದ್ಧದಲ್ಲಿ ಒಬ್ಬಂಟಿಯಾಗಿ ನಿಲ್ಲಲೂ ಹಿಂಜರಿಯುವುದಿಲ್ಲ. ಆದರೆ ಹಮಾಸ್ ವಿರುದ್ಧದ ಹೋರಾಟ ಮಾತ್ರ ಮುಂದುವರಿಯುತ್ತದೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ದಕ್ಷಿಣ ಗಾಝಾದ ರಫಾ ನಗರದ ಮೇಲೆ ಬೃಹತ್ ಪ್ರಮಾಣದ ಆಕ್ರಮಣದ ಯೋಜನೆಗೆ ಇಸ್ರೇಲ್ ಚಾಲನೆ ನೀಡಿದರೆ ಆ ದೇಶಕ್ಕೆ ಅಮೆರಿಕದಿಂದ ಪೂರೈಕೆಯಾಗುವ ಕೆಲವು ಶಸ್ತ್ರಾಸ್ತ್ರಗಳನ್ನು ತಡೆಹಿಡಿಯುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಹೇಳಿಕೆ ನೀಡಿದ್ದರು.
1948ರ ಅರಬ್-ಇಸ್ರೇಲ್ ಯುದ್ಧದ ಬಗ್ಗೆ ಉಲ್ಲೇಖಿಸಿದ ನೆತನ್ಯಾಹು `ಆಗ ನಾವು `ಹಲವರ ವಿರುದ್ಧ ಕೆಲವರಾಗಿದ್ದೆವು. ಆದರೆ ಈಗ ಹೆಚ್ಚು ಬಲಿಷ್ಟವಾಗಿದ್ದೇವೆ. ದೃಢಸಂಕಲ್ಪ ಮಾಡಿದ್ದೇವೆ. ನಮ್ಮ ಶತ್ರುಗಳನ್ನು, ನಮ್ಮನ್ನು ನಾಶಗೊಳಿಸಲು ಬಯಸುವವರನ್ನು ಸೋಲಿಸಲು ಒಗ್ಗಟ್ಟಿನಲ್ಲಿದ್ದೇವೆ. ಬೆರಳಿನ ಉಗುರುಗಳಿಂದಲೂ ನಾವು ಹೋರಾಡಬಲ್ಲೆವು. ಆದರೆ ನಮಗೆ ಬೆರಳಿನ ಉಗುರುಗಳ ಅಗತ್ಯ ಬೀಳದು. 1948ರ ಯುದ್ಧದಂತೆಯೇ ನಮ್ಮ ಚೈತನ್ಯ, ದೃಢಸಂಕಲ್ಪ ಮತ್ತು ದೇವರ ದಯೆಯಿಂದ ಗೆಲುವು ನಮ್ಮದಾಗಲಿದೆ ' ಎಂದು ಹೇಳಿದ್ದಾರೆ. ಅಮೆರಿಕ ಶಸ್ತ್ರಾಸ್ತ್ರ ಪೂರೈಕೆ ಸ್ಥಗಿತಗೊಳಿಸಿದರೂ ಅದರಿಂದ ಯುದ್ಧದ ಮೇಲೆ ತಕ್ಷಣಕ್ಕೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ವಿಶ್ಲೇಷಿಸಲಾಗಿದೆ.
`ರಫಾದಲ್ಲಿ ನಮ್ಮ ಯೋಜನೆಯನ್ನು ಪೂರ್ಣಗೊಳಿಸಲು ಸಾಕಾಗುವಷ್ಟು ಶಸ್ತ್ರಾಸ್ತ್ರ ಸೇನೆಯ ಬಳಿಯಿದೆ' ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗಾರಿ ಹೇಳಿದ್ದಾರೆ. ಯುದ್ಧ ಆರಂಭವಾದಂದಿನಿಂದಲೂ ಅಮೆರಿಕ ನಮಗೆ ಅಪಾರ ಬೆಂಬಲ ನೀಡಿದೆ. ನಮಗೆ ನಮ್ಮದೇ ಆದ ಹಿತಾಸಕ್ತಿಗಳಿವೆ ಮತ್ತು ಅಮೆರಿಕದ ಹಿತಾಸಕ್ತಿಗಳ ಬಗ್ಗೆಯೂ ಸಂವೇದನಾಶೀಲರಾಗಿದ್ದೇವೆ' ಎಂದವರು ಹೇಳಿದ್ದಾರೆ.