ಕಮಲಾ ಹ್ಯಾರಿಸ್, ಬೈಡನ್ ರಿಂದ ಹಿಂದೂಗಳ ಕಡೆಗಣನೆ: ಟ್ರಂಪ್ ಆರೋಪ
screengrab/X.com
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ವಿಶ್ವಾದ್ಯಂತ ಹಿಂದೂಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ "ಅರಾಜಕತೆ" ಮುಂದುವರಿದಿದ್ದು, ವಿಶ್ವಾದ್ಯಂತ ಮತ್ತು ಅಮೆರಿಕದಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ನಡೆಯುತ್ತಿದ್ದರೂ, ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಹಿಂದೂಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು. ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿರುವ ಅವರು, ಚುನಾವಣೆಯಲ್ಲಿ ಜಯ ಗಳಿಸಿದರೆ ಅಮೆರಿಕದ ಹಿಂದೂಗಳಿಂದ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುತ್ತೇನೆ. ಪ್ರಬಲ ಗುಂಪುಗಳು ಅಲ್ಪಸಂಖ್ಯಾತರನ್ನು ಲೂಟಿ ಮಾಡುತ್ತಿದ್ದು, ಇಡೀ ದೇಶದಲ್ಲಿ ಅರಾಜಕ ವಾತಾವರಣ ಇದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಟ್ರಂಪ್ ಹೇಳಿದ್ದಾರೆ.
ಇಸ್ರೇಲ್ ನಿಂದ ಹಿಡಿದು, ಉಕ್ರೇನ್ ಹಾಗೂ ನಮ್ಮ ದಕ್ಷಿಣ ಗಡಿ ವಿಚಾರದಲ್ಲೂ ಅವರು ಅನಾಹುತಗಳನ್ನೇ ಮಾಡಿದ್ದಾರೆ. ಆದರೆ ನಾವು ಮತ್ತೆ ಅಮೆರಿಕವನ್ನು ಪ್ರಬಲಗೊಳಿಸುತ್ತೇವೆ ಹಾಗೂ ದೃಢತೆಯ ಮೂಲಕ ಶಾಂತಿ ಮರುಸ್ಥಾಪನೆ ಮಾಡುತ್ತೇವೆ" ಎಂದು ವಿವರಿಸಿದ್ದಾರೆ.