ಅಕ್ರಮ ಗಣಿಗಾರಿಕೆ ಪ್ರಕರಣ : ಕಾಂಗೋದಲ್ಲಿ ಚೀನಾದ ಪ್ರಜೆಗಳಿಗೆ ಶಿಕ್ಷೆ
ಸಾಂದರ್ಭಿಕ ಚಿತ್ರ
ಬೆಕಾವು : ಕಾಂಗೋದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಮೂವರು ಚೀನಾ ಪ್ರಜೆಗಳಿಗೆ 7 ವರ್ಷದ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.
ಚಿನ್ನದ ಗಟ್ಟಿಗಳು ಹಾಗೂ 4 ಲಕ್ಷ ಡಾಲರ್ ನಗದು ಹೊಂದಿದ್ದ ಮತ್ತು ಗಣಿಗಾರಿಕೆ ವಲಯಕ್ಕೆ ಸಂಬಂಧಿಸಿ ಅಕ್ರಮ ಚಟುವಟಿಕೆಗಳಲ್ಲಿ ತಪ್ಪಿತಸ್ತರೆಂದು ಸಾಬೀತಾಗಿದೆ. ಆಂತರಿಕ ಬಿಕ್ಕಟ್ಟಿನಿಂದ ಜರ್ಝರಿತಗೊಂಡಿರುವ ಕಾಂಗೋ ಗಣರಾಜ್ಯದ ಪೂರ್ವದ ಪ್ರಾಂತಗಳಲ್ಲಿ ಚೀನಾದ ನಾಗರಿಕರು ಅತ್ಯಮೂಲ್ಯ ಖನಿಜಗಳನ್ನು ಅಕ್ರಮ ಗಣಿಗಾರಿಕೆಯ ಮೂಲಕ ಹೊರತೆಗೆದು ಸರಕಾರಕ್ಕೆ ವಂಚಿಸುತ್ತಿದ್ದಾರೆ. ಇವರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಕಠಿಣ ಸಂದೇಶ ರವಾನಿಸಬೇಕು ಎಂದು ವಿಚಾರಣೆಯಲ್ಲಿ ಸರಕಾರದ ಪರ ವಕಾಲತ್ತು ವಹಿಸಿದ ಕ್ರಿಶ್ಚಿಯನ್ ವಂಡುಮಾ ನ್ಯಾಯಾಲಯದಲ್ಲಿ ಮನವಿ ಮಾಡಿದರು.
ವಿಚಾರಣೆ ನಡೆಸಿದ ನ್ಯಾಯಾಲಯ ಚೀನಾದ ಮೂವರಿಗೆ ತಲಾ 7 ವರ್ಷ ಜೈಲುಶಿಕ್ಷೆ, ತಲಾ 6 ಲಕ್ಷ ಡಾಲರ್ ದಂಡ ಪಾವತಿಸಲು ಮತ್ತು ಶಿಕ್ಷೆಯ ಅವಧಿ ಪೂರೈಸಿದ ಬಳಿಕ ಕಾಂಗೋ ಗಣರಾಜ್ಯಕ್ಕೆ ಶಾಶ್ವತ ಪ್ರವೇಶ ನಿಷೇಧಿಸಿ ತೀರ್ಪು ನೀಡಿರುವುದಾಗಿ ವರದಿಯಾಗಿದೆ.