ಗಾಝಾದಲ್ಲಿ ತಕ್ಷಣ ಯುದ್ಧವಿರಾಮ ಜಾರಿ : ಚೀನಾದಲ್ಲಿ ಅರಬ್ ಮತ್ತು ಮುಸ್ಲಿಮ್ ನಿಯೋಗದ ಆಗ್ರಹ
Photo: X/Kanthan2030
ಬೀಜಿಂಗ್: ಇಸ್ರೇಲ್-ಹಮಾಸ್ ಯುದ್ಧವನ್ನು ಅಂತ್ಯಗೊಳಿಸುವ ಮತ್ತು ಗಾಝಾ ಪ್ರದೇಶಕ್ಕೆ ಮಾನವೀಯ ನೆರವಿನ ಪೂರೈಕೆಗೆ ಅವಕಾಶ ಒದಗಿಸಲು ಅಂತರಾಷ್ಟ್ರೀಯ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಚೀನಾಕ್ಕೆ ಭೇಟಿ ನೀಡಿರುವ ಅರಬ್ ಮತ್ತು ಮುಸ್ಲಿಂ ದೇಶಗಳ ಸಚಿವರ ನಿಯೋಗ ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಗೆ ಸೋಮವಾರ ಆಗ್ರಹಿಸಿದೆ.
ಫೆಲೆಸ್ತೀನಿಯನ್ ಪ್ರಾಧಿಕಾರ, ಇಂಡೊನೇಶ್ಯಾ, ಸೌದಿ ಅರೆಬಿಯಾ, ಈಜಿಪ್ಟ್ ಮತ್ತು ಜೋರ್ಡನ್ ದೇಶಗಳ ವಿದೇಶಾಂಗ ಸಚಿವರ ನಿಯೋಗ ಸೋಮವಾರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಮಾತುಕತೆ ನಡೆಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎಲ್ಲಾ ಐದು ಖಾಯಂ ಸದಸ್ಯದೇಶಗಳಿಗೆ ಭೇಟಿ ನೀಡಿ ಮುಖಂಡರೊಂದಿಗೆ ಈ ನಿಯೋಗ ಸಭೆ ನಡೆಸುವ ಗುರಿ ಹೊಂದಿದ್ದು ಪ್ರಥಮ ಚರಣದಲ್ಲಿ ಚೀನಾಕ್ಕೆ ಆಗಮಿಸಿದೆ. ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಕ್ರಮಗಳನ್ನು ಸ್ವರಕ್ಷಣೆ ಎಂದು ಸಮರ್ಥಿಸದಂತೆ ಪಾಶ್ಚಿಮಾತ್ಯ ದೇಶಗಳ ಮೇಲೆ ಒತ್ತಡ ಹೇರುವುದೂ ಈ ಪ್ರವಾಸದ ಉದ್ದೇಶವಾಗಿದೆ.
ನಾವು ಸ್ಪಷ್ಟ ಸಂಕೇತಗಳನ್ನು ರವಾನಿಸಲು ಇಲ್ಲಿ ಸೇರಿದ್ದೇವೆ. ಅಂದರೆ ತಕ್ಷಣವೇ ಸಂಘರ್ಷ ಮತ್ತು ಹತ್ಯೆಗಳನ್ನು ನಿಲ್ಲಿಸಬೇಕು, ನಾವು ತಕ್ಷಣವೇ ಗಾಝಾಕ್ಕೆ ಮಾನವೀಯ ಸರಬರಾಜುಗಳನ್ನು ತಲುಪಿಸಬೇಕು' ಎಂದು ಸೌದಿ ವಿದೇಶಾಂಗ ಸಚಿವ ಯುವರಾಜ ಫೈಸಲ್ ಬಿನ್ ಫರ್ಹಾನ್ ಅಲ್ ಸವುದ್ ಆಗ್ರಹಿಸಿದ್ದಾರೆ. `ಗಾಝಾದಲ್ಲಿ ಫೆಲೆಸ್ತೀನೀಯರ ವಿರುದ್ಧದ ದಾಳಿಯನ್ನು ನಿಲ್ಲಿಸಲು ಚೀನಾದಂತಹ ಸೂಪರ್ ಪವರ್ನ ಬಲವಾದ ಪಾತ್ರವನ್ನು ಎದುರು ನೋಡುತ್ತಿದ್ದೇವೆ. ದುರದೃಷ್ಟವಶಾತ್ ಇಸ್ರೇಲ್ನ ದಾಳಿಗಳನ್ನು ಸಮರ್ಥಿಸುವ ಪ್ರಮುಖ ದೇಶಗಳಿವೆ' ಎಂದು ಈಜಿಪ್ಟ್ನ ವಿದೇಶಾಂಗ ಸಚಿವ ಸಮೇಹ್ ಶೌಕ್ರಿ ಹೇಳಿದರು.
ಈ ತಿಂಗಳು ರಿಯಾದ್ನಲ್ಲಿ ನಡೆದಿದ್ದ ಇಸ್ಲಾಮಿಕ್-ಅರಬ್ ಜಂಟಿ ಶೃಂಗಸಭೆಯಲ್ಲಿ `ಫೆಲೆಸ್ತೀನಿಯನ್ ಪ್ರದೇಶಗಳಲ್ಲಿ ಇಸ್ರೇಲ್ ಮಾಡುತ್ತಿರುವ ಯುದ್ಧಾಪರಾಧ ಹಾಗೂ ಮಾನವೀಯತೆಯ ವಿರುದ್ಧದ ಅಪರಾಧ'ಗಳನ್ನು ತನಿಖೆ ಮಾಡುವಂತೆ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ)ಯನ್ನು ಒತ್ತಾಯಿಸಲಾಗಿತ್ತು.