ಇಮ್ರಾನ್ ಖಾನ್, ಪತ್ನಿಯ ವಿರುದ್ಧ ದೋಷಾರೋಪಣೆ
ಇಮ್ರಾನ್ ಖಾನ್ (Photo: PTI)
ಇಸ್ಲಮಾಬಾದ್: ಅಲ್ ಖಾದಿರ್ ವಿವಿ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಷ್ರಾ ಬೀಬಿ ವಿರುದ್ಧ ಪಾಕಿಸ್ತಾನದ ವಿಶೇಷ ನ್ಯಾಯಾಲಯ ಮಂಗಳವಾರ ದೋಷಾರೋಪಣೆ ಮಾಡಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.
ಇಮ್ರಾನ್ ಖಾನ್ರನ್ನು ಬಂಧನದಲ್ಲಿಟ್ಟಿರುವ ರಾವಲ್ಪಿಂಡಿಯ ಗರಿಷ್ಟ ಭದ್ರತೆಯ ಅಡಿಯಾಲಾ ಜೈಲಿನಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನಾಸಿರ್ ಜಾವೆದ್ ರಾಣಾ ಪ್ರಕರಣದ ವಿಚಾರಣೆ ನಡೆಸಿ ಆರೋಪ ಪಟ್ಟಿಯನ್ನು ಓದಿ ಹೇಳಿದರು. ಖಾನ್ ಮತ್ತು ಅವರ ಪತ್ನಿಯ ವಿರುದ್ಧ `ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೊ(ಎನ್ಎಬಿ) ವಿಚಾರಣೆ ಆರಂಭಿಸಿದ್ದು 58 ಸಾಕ್ಷಿಗಳ ಹೇಳಿಕೆ ದಾಖಲಿಸುವುದಾಗಿ ಹೇಳಿದೆ. ವಿಚಾರಣೆ ಸಂದರ್ಭ ಇಮ್ರಾನ್ ಹಾಗೂ ಅವರ ಪತ್ನಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದರು. ಮಾರ್ಚ್ 6ಕ್ಕೆ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯ, ಆಗ 5 ಸಾಕ್ಷಿಗಳನ್ನು ಹಾಜರುಪಡಿಸುವಂತೆ ಎನ್ಎಬಿಗೆ ಸೂಚಿಸಿದೆ. ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಹಾಗೂ ಅವರ ಪತ್ನಿಗೆ 14 ವರ್ಷ ಜೈಲುಶಿಕ್ಷೆಯಾಗಿದ್ದು ಇಮ್ರಾನ್ ಅಡಿಯಾಲಾ ಜೈಲಿನಲ್ಲಿ ಬಂಧನದಲ್ಲಿದ್ದರೆ ಬುಷ್ರಾ ಬೀಬಿಯನ್ನು ಇಸ್ಲಮಾಬಾದ್ನಲ್ಲಿನ ನಿವಾಸದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ.