ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ತೀವ್ರ ಕಳವಳ ವ್ಯಕ್ತಪಡಿಸಿದ ಅಮೆರಿಕ
"ಸಿಎಎ ಅನುಷ್ಠಾನ ಕುರಿತು ನಾವು ನಿಗಾ ವಹಿಸಿದ್ದೇವೆ"
ಮ್ಯಾಥ್ಯೂ ಮಿಲ್ಲರ್ | Photo: X \ @StateDeptSpox
ವಾಷಿಂಗ್ಟನ್: ಭಾರತದಲ್ಲಿ ಪೌರತ್ವ(ತಿದ್ದುಪಡಿ)ಕಾಯ್ದೆ ಬಗ್ಗೆ ಅಧಿಸೂಚನೆ ಹೊರಡಿಸಿರುವ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದರ ಅನುಷ್ಠಾನದ ಬಗ್ಗೆ ನಿಗಾ ವಹಿಸುವುದಾಗಿ ಹೇಳಿದೆ.
"ಮಾರ್ಚ್ 11ರಂದು ಪೌರತ್ವ (ತಿದ್ದುಪಡಿ) ಕಾಯ್ದೆಯ ಅಧಿಸೂಚನೆ ಹೊರಡಿಸಿದ ಬಗ್ಗೆ ನಮಗೆ ತೀವ್ರ ಆತಂಕವಿದೆ" ಎಂದು ರಕ್ಷಣಾ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.
"ಇದನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತದೆ ಎಂಬ ಬಗ್ಗೆ ನಾವು ತೀವ್ರ ಕಣ್ಗಾವಲು ಇಟ್ಟಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಮತ್ತು ಎಲ್ಲ ಸಮುದಾಯಗಳಿಗೆ ಕಾನೂನಿಗಡಿ ಸಮಾನ ಪರಿಗಣನೆಯು ಪ್ರಜಾಸತ್ತಾತ್ಮಕ ತತ್ವಗಳ ಮೂಲಭೂತ ಅಂಶಗಳು" ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭಾರತ ಸರ್ಕಾರ ಪೌರತ್ವ (ತಿದ್ದುಪಡಿ) ಕಾಯ್ದೆ-2019ನ್ನು ಸೋಮವಾರ ಜಾರಿಗೊಳಿಸಿದ್ದು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೆ ಮುನ್ನ ಭಾರತಕ್ಕೆ ಬಂದ ಮುಸ್ಲಿಮೇತರ ವಲಸೆಗಾರರಿಗೆ ಪೌರತ್ವ ಮಂಜೂರು ಮಾಡಲು ಇದು ಅವಕಾಶ ಮಾಡಿಕೊಡುತ್ತದೆ.
ಇದು ಭಾರತೀಯ ಮುಸ್ಲಿಮರ ಪೌರತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರು ಹಿಂದೂಗಳಂತೆಯೇ ಎಲ್ಲ ಹಕ್ಕುಗಳನ್ನು ಹೊಂದಿರುತ್ತಾರೆ. ಆದ್ದರಿಂದ ಭಾರತೀಯ ಮುಸ್ಲಿಮರು ಸಿಎಎ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಭಾರತ ಸರ್ಕಾರ ಹೇಳಿಕೆ ನೀಡಿತ್ತು.
ಸಿಎಎ ಇರುವುದು ಪೌರತ್ವ ಮಂಜೂರು ಮಾಡುವ ಸಂಬಂಧ. ಆದ್ದರಿಂದ ದೇಶದಲ್ಲಿ ಯಾರು ಕೂಡಾ ಇದರಿಂದಾಗಿ ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಅಭಯ ನೀಡಿದೆ.