ತೀರ್ಪು ಅಮಾನತಾದರೂ ಇಮ್ರಾನ್ ಚುನಾವಣೆಯಲ್ಲಿ ಸ್ಪರ್ಧಿಸಲಾಗದು: ಕಾನೂನು ತಜ್ಞರ ಅಭಿಮತ
ಇಸ್ಲಾಮಾಬಾದ್, ಆ.30: ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಕಾರಣವಾದ ವಿಚಾರಣಾ ನ್ಯಾಯಾಲಯದ ಆಗಸ್ಟ್ 5ರ ತೀರ್ಪನ್ನು ಅಮಾನತುಗೊಳಿಸುವಂತೆ ಕೋರಿಕೆ ಸಲ್ಲಿಸದೇ ಇಮ್ರಾನ್ ಖಾನ್ ಕಾನೂನು ತಂಡ ಬಹುದೊಡ್ಡ ಪ್ರಮಾದ ಎಸಗಿದೆ ಎಂದು ಪ್ರಮುಖ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತೀರ್ಪನ್ನು ಅಮಾನತುಗೊಳಿಸುವಂತೆ ಮಾತ್ರ ವಿನಂತಿಸಿದ್ದಾರೆ. ಆದರೆ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಮತ್ತು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ವಿನಂತಿಸಿಲ್ಲ. ಆದ್ದರಿಂದಲೇ ಉನ್ನತ ನ್ಯಾಯಾಲಯ ತೀರ್ಪನ್ನು ಅಮಾನತುಗೊಳಿಸಿದರೂ ಇಮ್ರಾನ್ ಅಟೋಕ್ ಜೈಲಿನಲ್ಲೇ ಇರುವಂತಾಗಿದೆ. ತೋಷಖಾನಾ ಪ್ರಕರಣದಲ್ಲಿ ಅವರ ಶಿಕ್ಷೆ ಮತ್ತು ಅನರ್ಹತೆ ಹಾಗೆಯೇ ಉಳಿದಿರುವುದರಿಂದ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲಾಗದು ಎಂದು ನ್ಯಾಯವಾದಿ ಫೈಸಲ್ ಸಿದ್ದಿಖಿ ಹೇಳಿದ್ದಾರೆ. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದ್ದರೆ, ಇಸ್ಲಾಮಾಬಾದ್ ಹೈಕೋರ್ಟ್ ಪ್ರಕರಣದ ಅರ್ಹತೆಯ ಬಗ್ಗೆ ವ್ಯಾಪಕವಾಗಿ ಚರ್ಚಿಸುತ್ತಿತ್ತು. ಒಂದು ವೇಳೆ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಅಮಾನತುಗೊಳಿಸಿದ್ದರೆ ಇಮ್ರಾನ್ ಖಾನ್ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.