ಎಸ್ ಸಿ ಒ ಶೃಂಗಸಭೆಯ ಹಿನ್ನೆಲೆ | ಪ್ರತಿಭಟನೆ ರದ್ದುಗೊಳಿಸಿದ ಇಮ್ರಾನ್ ಖಾನ್ ಪಕ್ಷ
ಇಮ್ರಾನ್ ಖಾನ್ | PC: PTI
ಇಸ್ಲಾಮಾಬಾದ್ : ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ನಡೆಯುವ ಶಾಂಘೈ ಸಹಕಾರ ಸಂಘಟನೆಯ(ಎಸ್ ಸಿ ಒ) ಶೃಂಗಸಭೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಯೋಜಿಸಿದ್ದ ಪ್ರತಿಭಟನೆಯನ್ನು ರದ್ದುಗೊಳಿಸುವುದಾಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಮಂಗಳವಾರ ಘೋಷಿಸಿದೆ.
ಜೈಲಿನಲ್ಲಿರುವ ಇಮ್ರಾನ್ ಖಾನ್ ರ ಆರೋಗ್ಯ ವಿಚಾರಿಸಲು ವೈದ್ಯಕೀಯ ತಂಡವನ್ನು ರವಾನಿಸಲು ಪಾಕ್ ಸರಕಾರ ಸಮ್ಮತಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದೂಡುವುದಾಗಿ ಪಕ್ಷದ ಮೂಲಗಳು ಘೋಷಿಸಿವೆ. ಈ ಮಧ್ಯೆ, ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದ್ದು ಲಾಕ್ ಡೌನ್ ಜಾರಿಗೊಳಿಸಲಾಗಿದೆ.
ಎಸ್ ಸಿ ಒ ಸದಸ್ಯ ದೇಶಗಳ ಪ್ರತಿನಿಧಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಸೋಮವಾರದಿಂದ ಬುಧವಾರದವರೆಗೆ ರಜಾದಿನ ಘೋಷಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಸೇನಾ ತುಕಡಿಯನ್ನು ನಿಯೋಜಿಸಲಾಗಿದ್ದು ಬ್ಯಾರಿಕೇಡ್ ನಿರ್ಮಿಸಲಾಗಿದೆ. ಮಂಗಳವಾರ ಆರಂಭಗೊಂಡಿರುವ ಸಭೆಯ ಮುಖ್ಯ ಕಾರ್ಯಕ್ರಮ ಬುಧವಾರ ನಡೆಯಲಿದ್ದು ಭದ್ರತಾ ಸಹಕಾರ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಮುಖಂಡರು ಹಾಗೂ ಅಧಿಕಾರಿಗಳು ಚರ್ಚಿಸಲಿದ್ದಾರೆ. ಪಾಶ್ಚಿಮಾತ್ಯ ಒಕ್ಕೂಟಕ್ಕೆ ಪ್ರತಿಯಾಗಿ 2001ರಲ್ಲಿ ರಶ್ಯ ಮತ್ತು ಚೀನಾ ಎಸ್ಸಿರಒ ಸಂಘಟನೆಯನ್ನು ಸ್ಥಾಪಿಸಿದ್ದು ಇರಾನ್, ಭಾರತ, ಪಾಕಿಸ್ತಾನ, ಕಝಕ್ಸ್ತಾ ನ, ಕಿರ್ಗಿಸ್ತಾನ, ತಝಿಕಿಸ್ತಾನ ಮತ್ತು ಉಜ್ಬೇಕಿಸ್ತಾನಗಳು ಸದಸ್ಯರಾಗಿವೆ. ಇತರ 16 ದೇಶಗಳು ವೀಕ್ಷಕ ಸ್ಥಾನಮಾನ ಪಡೆದಿವೆ. ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ನಂಬಿಕೆಯನ್ನು ಬಲಪಡಿಸುವುದು, ವ್ಯಾಪಾರ, ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸುವುದು ಮತ್ತು ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಜಂಟಿಯಾಗಿ ಪ್ರಯತ್ನಿಸುವುದು ಎಸ್ಸಿಶಒದ ಪ್ರಮುಖ ಉದ್ದೇಶವಾಗಿದೆ.