5 ವರ್ಷ ಚುನಾವಣಾ ಸ್ಪರ್ಧೆಗೆ ಇಮ್ರಾನ್ ಖಾನ್ ಅನರ್ಹ
ಇಸ್ಲಾಮಾಬಾದ್: ಮುಂದಿನ ಐದು ವರ್ಷಗಳ ಅವಧಿಗೆ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ದೇಶದ ಚುನಾವಣಾ ಆಯೋಗ ಅನರ್ಹಗೊಳಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾದ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಿದೆ. ತೋಷಖಾನಾ ಭ್ರಷ್ಟಾಚಾರ ಹಗರಣದಲ್ಲಿ ಶಿಕ್ಷಿತರಾದ ಅವರನ್ನು ಇತ್ತೀಚೆಗೆ ಲಾಹೋರ್ನಲ್ಲಿ ಬಂಧಿಸಲಾಗಿತ್ತು.
ಇಮ್ರಾನ್ ಅನರ್ಹತೆಯ ಅಧಿಸೂಚನೆಯನ್ನು ಮಂಗಳವಾರ ಪಾಕಿಸ್ತಾನದ ಚುನಾವಣಾ ಆಯೋಗ ಹೊರಡಿಸಿದ್ದು, ಐದು ವರ್ಷಗಳ ಕಾಲ ಸ್ಪರ್ಧೆಯಿಂದ ಅನರ್ಹಗೊಳಿಸಿದೆ.
ಚುನಾವಣಾ ಆಯೋಗ ತನ್ನ ಅಧಿಸೂಚನೆಯಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿದ್ದು, ಸಂವಿಧಾನದ 63(1)(ಎಚ್) ಮತ್ತು ಚುನಾವಣಾ ಕಾಯ್ದೆ-2017ರು ಸೆಕ್ಷನ್ 232ರ ಅನ್ವಯ ಅನರ್ಹಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. "ಆದ್ದರಿಂದ ಇಮ್ರಾನ್ ಖಾನ್ ನೈಝಿ ಅವರನ್ನು ಐದು ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗಿದೆ ಮತ್ತು ಎನ್ಎ-45 ಕುರ್ರಂ-1 ಕ್ಷೇತ್ರದಿಂದ ವಾಪಸ್ಸಾದ ಅಭ್ಯರ್ಥಿ ಎಂದು ಡಿನೋಟಿಫೈ ಮಾಡಲಾಗಿದೆ" ಎಂದು ಹೇಳಿದೆ.
ಈ ಆದೇಶದಿಂದಾಗಿ ಇಮ್ರಾನ್ ಖಾನ್ ಮುಂದಿನ ನವೆಂಬರ್ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.