ಪಾಕಿಸ್ತಾನದಲ್ಲಿ ನಾಳೆ ಇಮ್ರಾನ್ ಖಾನ್ ಪಕ್ಷದಿಂದ ರಾಷ್ಟ್ರವ್ಯಾಪಿ ಬಂದ್ ಕರೆ
Photo: twitter.com/khaleejtimes
ಇಸ್ಲಾಮಾಬಾದ್: ದೇಶದ ರಾಜಕೀಯವನ್ನು ಕಡೆಗಣಿಸಲಾಗುತ್ತಿದೆ ಎಂದು ಆಪಾದಿಸಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಶನಿವಾರ ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿದೆ. ಪ್ರತಿಸ್ಪರ್ಧಿ ಪಕ್ಷಗಳು ದೇಶದ ಜನತೆಯ ಆದೇಶವನ್ನು ಕದಿಯಲು ಅವಕಾಶ ನೀಡುವುದಿಲ್ಲ ಎಂದು ಇಮ್ರಾನ್ ಖಾನ್ ಗುಡುಗಿದ್ದಾರೆ.
ಫೆಬ್ರುವರಿ 8ರಂದು ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಎರಡು ಪ್ರಮುಖ ಪಕ್ಷಗಳಾದ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಝ್ (ಪಿಎಂಎಲ್-ಎನ್) ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮಂಗಳವಾರ ಸಮ್ಮಿಶ್ರ ಸರ್ಕಾರ ರಚಿಸುವುದಾಗಿ ಪ್ರಕಟಿಸಿವೆ.
ಇದರಿಂದಾಗಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ)ಗೆ ಅಧಿಕಾರದ ಅವಕಾಶ ಇಲ್ಲ. ರಾಷ್ಟ್ರೀ ಅಸೆಂಬ್ಲಿಯಲ್ಲಿ ಈ ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದ್ದರು.
ತನ್ನ ತಂತ್ರಗಾರಿಕೆಯನ್ನು ಬದಲಿಸಿರುವ ಪಿಟಿಐ, ರಾಷ್ಟ್ರೀಯ ಹಾಗೂ ಪ್ರಾಂತೀಯ ಅಸೆಂಬ್ಲಿಗಳಿಗೆ ನಡೆದ ಚುನಾವಣೆಯಲ್ಲಿ ವ್ಯಾಪಕ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆಪಾದಿಸಿ ದೇಶವ್ಯಾಪಿ ಬಂದ್ಗೆ ಕರೆ ನೀಡಿದೆ. ಇದಕ್ಕೂ ಮುನ್ನ ಅಸೆಂಬ್ಲಿಗಳಲ್ಲಿ ಸಭಾಗ್ಯಾಗ ಮಾಡಲು ಪಿಟಿಐ ನಿರ್ಧರಿಸಿತ್ತು.