12 ಪ್ರಕರಣಗಳಲ್ಲಿ ಇಮ್ರಾನ್ ಪತ್ನಿ ಖುಲಾಸೆ
ಇಮ್ರಾನ್ಖಾನ್ ಅವರ ಪತ್ನಿ ಬುಷ್ರಾ ಬೀಬಿ | PC : news18.com
ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ಖಾನ್ ಅವರ ಪತ್ನಿ ಬುಷ್ರಾ ಬೀಬಿಯನ್ನು 2023ರ ಗಲಭೆಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿರುವುದಾಗಿ ವರದಿಯಾಗಿದೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಕಳೆದ ವರ್ಷ ಇಮ್ರಾನ್ಖಾನ್ರನ್ನು ಇಸ್ಲಾಮಾಬಾದ್ನಲ್ಲಿ ಅಧಿಕಾರಿಗಳು ಬಂಧಿಸಿದ ಬಳಿಕ ಅವರ ಪಕ್ಷದ(ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಅಥವಾ ಪಿಟಿಐ) ಬೆಂಬಲಿಗರು ಸೇನೆಯ ಪ್ರಧಾನ ಕಚೇರಿ ಸೇರಿದಂತೆ ಹಲವು ಸರಕಾರಿ ಸಂಸ್ಥೆಗಳ ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ಗಲಭೆಗೆ ಇಮ್ರಾನ್ಖಾನ್ ಹಾಗೂ ಅವರ ಪತ್ನಿ ಪ್ರಚೋದನೆ ನೀಡಿದ್ದರು ಎಂದು ಪ್ರಕರಣ ದಾಖಲಾಗಿತ್ತು.
ಬುಷ್ರಾ ಬೀಬಿಯ ವಿರುದ್ಧ ದಾಖಲಾಗಿದ್ದ 12 ಪ್ರಕರಣಗಳ ವಿಚಾರಣೆಗೆ ಅವರ ಖುದ್ದು ಹಾಜರಾತಿ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಅಡಿಯಾಲಾ ಜೈಲಿನ ವಿಶೇಷ ನ್ಯಾಯಾಲಯ, ಪೊಲೀಸರ ಮನವಿಯನ್ನು ತಿರಸ್ಕರಿಸಿ ಬುಷ್ರಾ ಬೀಬಿಯನ್ನು ಎಲ್ಲಾ 12 ಪ್ರಕರಣಗಳಿಂದಲೂ ಖುಲಾಸೆಗೊಳಿಸಿರುವುದಾಗಿ ಅವರ ವಕೀಲರು ಹೇಳಿದ್ದಾರೆ.