ವಿದ್ಯಾರ್ಥಿಗಳು, ವಲಸಿಗ ವೀಸಾ ಅರ್ಜಿದಾರರನ್ನು ಚಿಂತೆಗೀಡು ಮಾಡಿರುವ ಭಾರತ-ಕೆನಡಾ ರಾಜತಾಂತ್ರಿಕ ಕಲಹ
Photo: X/@JustinTrudeau
ಹೊಸದಿಲ್ಲಿ: ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ವಿವಾದವು ಉಲ್ಬಣಗೊಂಡಿರುವುದು ವಿದ್ಯಾರ್ಥಿಗಳು ಸೇರಿದಂತೆ ಪ್ರತಿವರ್ಷ ಆ ದೇಶಕ್ಕೆ ತೆರಳುವ ಹಲವಾರು ಭಾರತೀಯರನ್ನು ಚಿಂತೆಗೀಡು ಮಾಡತೊಡಗಿದೆ.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಕಲಹವು ಈಗಾಗಲೇ ಕಷ್ಟಕರವಾಗಿರುವ ವೀಸಾ ಪ್ರಕ್ರಿಯೆಯೆಗೆ ಇನ್ನಷ್ಟು ತೊಡಕುಗಳನ್ನುಂಟು ಮಾಡುತ್ತದೆ ಎಂದು ಭಾರತದಲ್ಲಿನ ವಿದ್ಯಾರ್ಥಿಗಳೊಂದಿಗೆ ಗುರುತಿಸಿಕೊಂಡಿರುವ ಶೈಕ್ಷಣಿಕ ಸಲಹಾ ಸಂಸ್ಥೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಕೆನಡಾ ಭಾರತೀಯ ವಿದ್ಯಾರ್ಥಿಗಳ ಎರಡನೇ ಅತ್ಯಂತ ಆದ್ಯತೆಯ ತಾಣವಾಗಿದ್ದರೂ ಕೋವಿಡ್ ಸಾಂಕ್ರಾಮಿಕದ ಬಳಿಕ ಅದು ತನ್ನ ವೀಸಾ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ.
ಪಂಜಾಬ ಮತ್ತು ಹರ್ಯಾಣಗಳಂತಹ ರಾಜ್ಯಗಳಿಂದ ವೀಸಾ ಅರ್ಜಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಟ್ಟದ ಪರಿಶೀಲನೆ ಇರಲಿದೆ ಮತ್ತು ಇದು ವಲಸಿಗರ ವೀಸಾ ಅರ್ಜಿಗಳು ಯಶಸ್ವಿಯಾಗುವುದನ್ನು ಹೆಚ್ಚು ಕಷ್ಟಕರವಾಗಿಸಲಿದೆ ಎಂದು ಕೆನಡಾದಲ್ಲಿಯ ಕಚೇರಿಗಳೊಂದಿಗೆ ಸಂಯೋಜನೆ ಹೊಂದಿರುವ ಕಂಪನಿಗಳೂ ಚಿಂತೆಗೀಡಾಗಿವೆ.
ಇದು ದೀರ್ಘಾವಧಿಯಲ್ಲಿ ವೀಸಾ ಅನುಮೋದನೆಗಳಲ್ಲಿ ಕಂಡು ಬರಲಿದೆ. ಕೆನಡಾಕ್ಕೆ ವಿದ್ಯಾರ್ಥಿ ವೀಸಾಗಳ ಪೈಕಿ ಕೇವಲ ಶೇ.೬೦ರಷ್ಟು ಅರ್ಜಿಗಳು ಯಶಸ್ವಿಯಾಗುತ್ತಿವೆ ಮತ್ತು ಇದು ಇನ್ನಷ್ಟು ಕಡಿಮೆಯಾಗಬಹುದು. ಕೇವಲ ಕೆನಡಾದ ಮೇಲೆ ಗಮನವನ್ನು ಕೇಂದ್ರೀಕರಿಸುವ ವಿದ್ಯಾರ್ಥಿಗಳು ಇತರ ಆಯ್ಕೆಗಳನ್ನೂ ಹೊಂದಿರುವುದು ಅಗತ್ಯವಾಗಿದೆ ಎಂದು ಅಪ್ಗ್ರಾಡ್ ಅಬ್ರಾಡ್ನ ಅಧ್ಯಕ್ಷ ಅಂಕುರ ಧವನ್ ಹೇಳಿದರು.
ಭಾರತ-ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಸ್ತುತ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಕೆನಡಾದಲ್ಲಿ ಉದ್ಯೋಗಾವಕಾಶಗಳನ್ನು ಬಯಸಿ ವಲಸೆ ವೀಸಾಗಳಿಗೆ ಅರ್ಜಿಗಳನ್ನು ಸಲ್ಲಿಸುವ ಭಾರತೀಯರು ಅತ್ಯಂತ ಕೆಟ್ಟದ್ದನ್ನು ಎದುರಿಸಬೇಕಾಗಬಹುದು. ಕೆನಡಾ ಅಧಿಕಾರಿಗಳು ಕಳೆದ ವರ್ಷವೇ ಅರ್ಜಿದಾರರ ದಾಖಲೆಗಳ ಪರಿಶೀಲನೆಯನ್ನು ಬಿಗಿಗೊಳಿಸಿದ್ದಾರೆ ಮತ್ತು ಈಗ ಅದು ಇನ್ನಷ್ಟು ಹೆಚ್ಚಲಿದೆ ಎಂದು ಬ್ಯಾಂಕೇತರ ಹಣಕಾಸು ಸಂಸ್ಥೆ ಜ್ಞಾನಧನ್ನ ಸಹಸ್ಥಾಪಕ ಮತ್ತು ಸಿಇಒ ಅಂಕಿತ ಮೆಹ್ರಾ ಹೇಳಿದರು.
ಕಳೆದ ಎರಡು ವರ್ಷಗಳಲ್ಲಿ ವಿದೇಶಗಳಿಗೆ ತೆರಳಲು ಬಯಸುತ್ತಿರುವವರ ಸಾಲದ ಅರ್ಜಿಗಳಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಆದರೆ ಪಂಜಾಬ್ನಲ್ಲಿ ೨೦೨೧ರಿಂದ ಐದು ಪಟ್ಟು ಹೆಚ್ಚಳ ಕಂಡು ಬಂದಿದೆ ಎಂದರು. ಪಂಜಾಬಿನ ಹೊರಗೆ ಅತ್ಯಂತ ಹೆಚ್ಚಿನ ಪಂಜಾಬಿಗಳು ಕೆನಡಾದಲ್ಲಿ ವಾಸವಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕೆನಡಾ ವಿದ್ಯಾರ್ಥಿಗಳು ತನ್ನ ದೇಶಕ್ಕೆ ಬರಲು,ಪರಿಸರ ವ್ಯವಸ್ಥೆಗೆ ಒಗ್ಗಿಕೊಳ್ಳಲು ಮತ್ತು ಅಲ್ಲಿಯೇ ನೆಲೆಸಲು ಆದ್ಯತೆ ನೀಡುತ್ತಿರುವುದರಿಂದ ವಲಸೆ ವೀಸಾಗಳನ್ನು ಅದು ನಿರ್ಬಂಧಿಸಬಹುದು. ಭಾರತದ ಕೆಲವು ರಾಜ್ಯಗಳಿಂದ ಅರ್ಜಿಗಳು ಹೆಚ್ಚಿನ ಪರಿಶೀಲನೆಗೆ ಒಳಗಾಗಬಹುದು ಎಂದು ಲೀವರೇಜ್ ಎಡ್ಯು ಸ್ಥಾಪಕ ಹಾಗೂ ಸಿಇಒ ಅಕ್ಷಯ ಚತುರ್ವೇದಿ ಹೇಳಿದರು.
ಕೆನಡಾ ಸರಕಾರವು ತಕ್ಷಣವೇ ವೀಸಾಗಳ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರದಿರಬಹುದು ಎಂದು ಹೆಚ್ಚಿನವರು ಆಶಿಸಿದ್ದರೆ,ಹಗೆತನದ ಉಲ್ಬಣವು ಅಂತಿಮವಾಗಿ ಅದಕ್ಕೆ ಕಾರಣವಾಗಬಹುದು ಎಂಬ ಭೀತಿಯೂ ಇದೆ.