ಲಂಡನ್: 70 ವರ್ಷಗಳ ಪಯಣ ನಿಲ್ಲಿಸಲಿರುವ ಇಂಡಿಯಾ ಕ್ಲಬ್ ರೆಸ್ಟೋರೆಂಟ್!
PHOTO : SAUDIGAZETTE
ಲಂಡನ್: ಕೇಂದ್ರ ಲಂಡನ್ ನ ಜನನಿಬಿಡ ರಸ್ತೆಯಲ್ಲಿರುವ ಹೋಟೆಲ್ ಸ್ಟ್ರಾಂಡ್ ಕಾಂಟಿನೆಂಟಲ್ ಒಳಗಿದ್ದ ಸಾಂಪ್ರದಾಯಿಕ ಲಾಂಜ್ - ರೆಸ್ಟೋರೆಂಟ್ ಮತ್ತು ಬಾರ್ ಆದ ದಿ ಇಂಡಿಯಾ ಕ್ಲಬ್, ತನ್ನ 70 ವರ್ಷಗಳ ಸುದೀರ್ಘ ಪಯಣವನ್ನು ನಿಲ್ಲಿಸಲಿದೆ ಎಂದು BBC ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಿ ಇಂಡಿಯಾ ಕ್ಲಬ್ ಹಲವಾರು ದಶಕಗಳಿಂದ ಕೇಂದ್ರ ಲಂಡನ್ ನಗರದಲ್ಲಿನ ದಕ್ಷಿಣ ಏಶ್ಯಾ ಸಮುದಾಯದವರ ಪಾಲಿಗೆ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿರುವ ತಾಣವಾಗಿತ್ತು. 1950ರಲ್ಲಿ ಪ್ರಾರಂಭವಾಗಿದ್ದ ಈ ರೆಸ್ಟೋರೆಂಟ್, ಆರಂಭದಲ್ಲಿ ಭಾರತದಿಂದ ವಲಸೆ ಬಂದವರು ಪರಸ್ಪರ ಭೇಟಿಯಾಗಲು ಮತ್ತು ಸಂಪರ್ಕಿತರಾಗಲು ಪ್ರಶಸ್ತ ತಾಣವಾಗಿತ್ತು. ಆದರೆ, ಈ ರೆಸ್ಟೋರೆಂಟ್ ಗೆ ಕಟ್ಟಡವನ್ನು ಬಾಡಿಗೆ ನೀಡಿರುವ ಮಾಲಕರು ಮತ್ತಷ್ಟು ಆಧುನಿಕ ಹೋಟೆಲ್ ನಿರ್ಮಿಸಲು ಈ ಕಟ್ಟಡದ ಒಂದು ಪಾರ್ಶ್ವವನ್ನು ನೆಲಸಮಗೊಳಿಸಲು ಮುಂದಾಗಿರುವುದರಿಂದ, ದಿ ಇಂಡಿಯಾ ಕ್ಲಬ್ ಅನಿವಾರ್ಯವಾಗಿ ಬಂದ್ ಆಗುತ್ತಿದೆ.
ದಿ ಇಂಡಿಯಾ ಕ್ಲಬ್ ನ ಹಲವಾರು ಪೋಷಕರು ಕ್ಲಬ್ ಬಂದ್ ಆಗುತ್ತಿರುವ ಸುದ್ದಿಗೆ ಖೇದ ವ್ಯಕ್ತಪಡಿಸಿದ್ದು, ಇದರಿಂದ ಈ ನಗರವು ಇತಿಹಾಸದ ಭಾಗವೊಂದನ್ನು ಕಳೆದುಕೊಳ್ಳಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತನ್ನ ರೆಸ್ಟೋರೆಂಟ್ ಬಂದ್ ಆಗುವುದರ ವಿರುದ್ಧ ದಿ ಇಂಡಿಯಾ ಕ್ಲಬ್ ಹಲವಾರು ವರ್ಷಗಳಿಂದ ಕಾನೂನು ಹೋರಾಟದಲ್ಲಿ ತೊಡಗಿಕೊಂಡಿತ್ತು. ಒಂದೆರಡು ವರ್ಷಗಳ ಹಿಂದೆ ಕ್ಲಬ್ ನ ಮಾಲಕರಾದ ಯಾದ್ಗರ್ ಮಾರ್ಕರ್ ಹಾಗೂ ಅವರ ಪುತ್ರಿ ಫಿರೋಝಾ ಜಂಟಿಯಾಗಿ ನಡೆಸಿದ ಸ್ಥಳ ರಕ್ಷಣೆಗಾಗಿನ ಅಭಿಯಾನಕ್ಕೆ ಸಾವಿರಾರು ಮಂದಿಯ ಸಹಿಗಳನ್ನು ಸ್ವೀಕರಿಸಿದ ನಂತರ ಕಟ್ಟಡ ನೆಲಸಮ ವಿರುದ್ಧದ ಕಾನೂನು ಹೋರಾಟದಲ್ಲಿ ಗೆದ್ದಿದ್ದರು.
ಆದರೆ, ಕಳೆದ ವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಕ್ಲಬ್ ಸೆಪ್ಟೆಂಬರ್ 17 ವರೆಗೆ ಮಾತ್ರ ತೆರೆದಿರಲಿದೆ ಎಂದು ತಿಳಿಸಿದ್ದಾರೆ.