ಯುಎನ್ಎಸ್ಸಿ ಸುಧಾರಣೆಗೆ ಯುಎಫ್ಸಿ ಮಾದರಿ ಸೂಕ್ತವಲ್ಲ: ಭಾರತ
21ನೇ ಶತಮಾನದ ಜಗತ್ತಿಗೆ ಯುಎನ್ 2.0 ಅತ್ಯಗತ್ಯ
Photo : NDTV
ವಿಶ್ವಸಂಸ್ಥೆ, ಮಾ.21: ವಿಶ್ವಸಂಸ್ಥೆ ಭದ್ರತಾ ಮಂಡಳಿ(ಯುಎನ್ಎಸ್ಸಿ) ಸುಧಾರಣೆಗೆ `ಯುನೈಟಿಂಗ್ ಫಾರ್ ಕನ್ಸೆನ್ಸಸ್' (ಯುಎಫ್ಸಿ) ಗುಂಪು ಮುಂದಿರಿಸಿರುವ ಮಾದರಿಯನ್ನು ಟೀಕಿಸಿರುವ ಭಾರತ, ಈ ಮಾದರಿಯು ಖಾಯಂ ಮತ್ತು ಶಾಶ್ವತವಲ್ಲದ ಸ್ಥಾನಗಳನ್ನು ವಿಸ್ತರಿಸಲು ಬಹುಪಾಲು ಸದಸ್ಯ ರಾಷ್ಟ್ರಗಳು ಬೆಂಬಲಿಸುವ ವಿಚಾರಕ್ಕೆ ವಿರುದ್ಧವಾಗಿದೆ ಮತ್ತು 21ನೇ ಶತಮಾನದ ಜಗತ್ತಿಗೆ ಯುಎನ್ 2.0 ತೀವ್ರವಾಗಿ ಅಗತ್ಯವಿದೆ ಎಂದು ಒತ್ತಿಹೇಳಿದೆ.
ಯುಎಫ್ಸಿ ಗುಂಪಿನಲ್ಲಿ ಅರ್ಜೆಂಟೀನಾ, ಕೆನಡಾ, ಕೊಲಂಬಿಯಾ, ಕೋಸ್ಟರಿಕಾ, ಇಟಲಿ, ಮಾಲ್ಟಾ, ಮೆಕ್ಸಿಕೋ, ಪಾಕಿಸ್ತಾನ, ದಕ್ಷಿಣ ಕೊರಿಯಾ, ಸ್ಯಾನ್ ಮರೀನೊ, ಸ್ಪೇನ್ ಮತ್ತು ಟರ್ಕಿ ದೇಶಗಳಿವೆ. ಚೀನಾ ಮತ್ತು ಇಂಡೊನೇಶ್ಯ ವೀಕ್ಷಕರಾಗಿ ಈ ಗುಂಪಿನಲ್ಲಿದೆ. ಭದ್ರತಾ ಮಂಡಳಿಯಲ್ಲಿ ಹೊಸ ಖಾಯಂ ಸದಸ್ಯರ ಸ್ಥಾಪನೆಯನ್ನು ಯುಎಫ್ಸಿ ಗುಂಪು ವಿರೋಧಿಸುತ್ತದೆ. 26 ಸದಸ್ಯರ ಭದ್ರತಾ ಮಂಡಳಿಯ ಜತೆಗೆ ಖಾಯಂ ಅಲ್ಲದ, ಚುನಾಯಿತ ಸದಸ್ಯರ ಸಂಖ್ಯೆ ಮಾತ್ರ ಹೆಚ್ಚಬೇಕು. ತಕ್ಷಣ ಮರುಚುನಾವಣೆ ನಡೆಯುವ ಸಾಧ್ಯತೆಯೊಂದಿಗೆ ದೀರ್ಘಾವಧಿಯ 9 ಹೊಸ ಸ್ಥಾನಗಳನ್ನು ಸೃಷ್ಟಿಸಬೇಕು ಎಂದು ಈ ಗುಂಪು ಪ್ರಸ್ತಾಪಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ ಬಗ್ಗೆ ನಡೆದ ಅಂತರ್ ಸರಕಾರಿ ಮಾತುಕತೆಯ ಸಂದರ್ಭ ಇಟಲಿ ಮುಂದಿರಿಸಿದ ಯುಎಫ್ಸಿ ಮಾದರಿಯ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆ ರಾಯಭಾರಿಗೆ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಂಬೋಜ್ `ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳು ಹೆಚ್ಚು ಸಂಕೀರ್ಣ, ಅನಿರೀಕ್ಷಿತ ಮತ್ತು ಅನಿಯಮಿತವಾಗಿರುವುದರಿಂದ 21ನೇ ಶತಮಾನದ ಜಗತ್ತಿಗೆ ಯುಎನ್ 2.0ರ ತೀವ್ರ ಅಗತ್ಯವಿದೆ. ಆದರೆ ವಿಶ್ವಸಂಸ್ಥೆಯ ಬಹುಪಾಲು ಸದಸ್ಯ ದೇಶಗಳು ಬೆಂಬಲಿಸುವ ವಿಚಾರಕ್ಕೆ 12 ದೇಶಗಳು ಹಾಗೂ ಎರಡು ವೀಕ್ಷಕರನ್ನು ಹೊಂದಿರುವ ಯುಎಫ್ಸಿ ಗುಂಪು ವಿರೋಧ ವ್ಯಕ್ತಪಡಿಸಿದೆ. ಆದರೆ ಕಾಯಂ ವರ್ಗದಲ್ಲಿ ಜಾಗತಿಕ ದಕ್ಷಿಣ ಮತ್ತು ಆಫ್ರಿಕಾದ ಸಮಾನ ಪ್ರಾತಿನಿಧ್ಯದ ಅಗತ್ಯವಿದೆ ಎಂಬುದು ಭಾರತದ ಅಚಲ ನಿಲುವಾಗಿದೆ' ಎಂದರು.
`ಪ್ರಾತಿನಿಧ್ಯವಿಲ್ಲದೆ, ಅಧಿಕಾರವಿಲ್ಲದೆ ಅಥವಾ ಸ್ಥಾನ, ಧ್ವನಿಯಿಲ್ಲದೆ ಜಾಗತಿಕ ದಕ್ಷಿಣದ ಸದಸ್ಯರು ವಿಶ್ವಸಂಸ್ಥೆಯ ಸಭೆಗೆ ಬಂದು ಹೋಗುವುದು ಸ್ವೀಕಾರಾರ್ಹವಲ್ಲ. ಭಾರತ ಜಿ20ರ ಅಧ್ಯಕ್ಷತೆ ವಹಿಸಿದ್ದ ಸಂದರ್ಭ ಆಫ್ರಿಕನ್ ಯೂನಿಯನ್ಗೆ ಜಿ20 ಸದಸ್ಯತ್ವ ದೊರಕಿದೆ. ಇದಕ್ಕಿಂತಲೂ ತುಂಬಾ ಹಳೆಯ ಸಂಸ್ಥೆಯಾಗಿರುವ ವಿಶ್ವಸಂಸ್ಥೆ ಈ ಬದಲಾವಣೆಯಿಂದ ಸ್ಫೂರ್ತಿ ಪಡೆಯುತ್ತದೆ ಎಂಬುದು ನಮ್ಮ ವಿಶ್ವಾಸವಾಗಿದೆ. 12 ಖಾಯಂ ಅಲ್ಲದ ಸದಸ್ಯರನ್ನು ಮಾತ್ರ ಸೇರಿಸುವ ಯುಎಫ್ಸಿಯ ಮಾದರಿಯು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಈಗಿನ ನಿಷ್ಕ್ರಿಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡುತ್ತದೆಯೇ ?. 5 ಕಾಯಂ ಸದಸ್ಯತ್ವದಲ್ಲಿ ಯಾವುದೇ ಬದಲಾವಣೆ ಬೇಡ ಎಂದು ಸಲಹೆಯನ್ನು ಕಾಯಂ ದೇಶವೊಂದರ ಪರವಾಗಿ ಮಾಡಲಾಗುತ್ತಿದೆ. ಇದು ಹಿತಾಸಕ್ತಿ ಸಂಘರ್ಷವಾಗುವುದಿಲ್ಲವೇ ಎಂದು ರುಚಿರಾ ಕಂಬೋಜ್ ಪ್ರಶ್ನಿಸಿದರು.
ವಿಶ್ವಸಂಸ್ಥೆಯ 5 ಕಾಯಂ ಸದಸ್ಯ ದೇಶಗಳಲ್ಲಿ ಒಂದಾಗಿರುವ ಚೀನಾ, ಯುಎಫ್ಸಿ ಗುಂಪಿನ ವೀಕ್ಷಕ ಸದಸ್ಯನಾಗಿದೆ. ಚೀನಾ, ಫ್ರಾನ್ಸ್, ರಶ್ಯ, ಬ್ರಿಟನ್ ಮತ್ತು ಅಮೆರಿಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿದ್ದು ವೀಟೊ ಅಧಿಕಾರ ಹೊಂದಿದೆ. ಸಮಿತಿಯ ಉಳಿದ 10 ಸದಸ್ಯರನ್ನು ಖಾಯಂ ಅಲ್ಲದ ಸದಸ್ಯರಾಗಿ 2 ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಈ ದೇಶಗಳಿಗೆ ವೀಟೊ ಅಧಿಕಾರವಿರುವುದಿಲ್ಲ.
ಭದ್ರತಾ ಮಂಡಳಿಯ ಸುಧಾರಣೆಗೆ ಜಿ4 ಮಾದರಿಯನ್ನು ಭಾರತ ಮುಂದಿರಿಸಿದೆ. ಇದರ ಪ್ರಕಾರ ಈಗ 15 ಇರುವ ಭದ್ರತಾ ಮಂಡಳಿಯ ಸದಸ್ಯರ ಸಂಖ್ಯೆ 25 ಕ್ಕೆ ಹೆಚ್ಚಬೇಕು(ಹೆಚ್ಚುವರಿಯಾಗಿ 6 ಕಾಯಂ ಸದಸ್ಯರನ್ನು ಮತ್ತು 4 ಕಾಯಂ ಅಲ್ಲದ ಸದಸ್ಯರ ಸೇರ್ಪಡೆ). ಯುಎಫ್ಸಿ ಮಾದರಿಯು ಖಾಯಂ ಸದಸ್ಯರು ಮತ್ತು ಶಾಶ್ವತವಲ್ಲದ ಸದಸ್ಯರ ನಡುವಿನ ಅಸಮತೋಲನಕ್ಕೆ ಸಂಬಂಧಿಸಿದ ಸಮಸ್ಯೆಗೆ ತಡೆಯೊಡ್ಡುವುದಿಲ್ಲ ಅಥವಾ ಆಫ್ರಿಕಾ ಹಾಗೂ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಧಿಕಾರ ನೀಡುವುದಿಲ್ಲ ಎಂದು ಭಾರತ ಪ್ರತಿಪಾದಿಸಿದೆ