ಪೂರ್ವ ಷರತ್ತುಗಳಿಲ್ಲದೆ ಫ್ರಾನ್ಸ್ ನಿಂದ ವಿಜಯ್ ಮಲ್ಯ ಗಡಿಪಾರಿಗೆ ಭಾರತ ಆಗ್ರಹ
ಪ್ಯಾರಿಸ್ : ಉದ್ಯಮಿ ವಿಜಯ್ ಮಲ್ಯರನ್ನು ಯಾವುದೇ ಪೂರ್ವಷರತ್ತು ಇಲ್ಲದೇ ಭಾರತಕ್ಕೆ ಗಡೀಪಾರು ಮಾಡುವ ಪ್ರಸ್ತಾವನೆಯನ್ನು ಅನುಮೋದಿಸುವಂತೆ ಭಾರತದ ಅಧಿಕಾರಿಗಳು ಫ್ರಾನ್ಸ್ ಗೆ ಔಪಚಾರಿಕ ಕೋರಿಕೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಎಪ್ರಿಲ್ 15ರಂದು ನಡೆದ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಭಾರತ-ಫ್ರಾನ್ಸ್ ಜಂಟಿ ಕ್ರಿಯಾ ಸಮಿತಿಯ 16ನೇ ಅಧಿವೇಶನದಲ್ಲಿ ಈ ಕುರಿತ ಕೋರಿಕೆಯನ್ನು ಸಲ್ಲಿಸಲಾಗಿದೆ. ಮಲ್ಯ ಗಡೀಪಾರಿಗೆ ಸಲ್ಲಿಸಿದ್ದ ಪ್ರಸ್ತಾವನೆಯ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡುವಂತೆ ಭಾರತದ ನಿಯೋಗ ಸಭೆಯಲ್ಲಿ ಒತ್ತಾಯಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಕೆಲವೊಂದು ಪೂರ್ವ ಷರತ್ತುಗಳೊಂದಿಗೆ ಗಡೀಪಾರು ಮಾಡುವ ಪ್ರಸ್ತಾವನೆಯನ್ನು ಫ್ರಾನ್ಸ್ ಮುಂದಿರಿಸಿದೆ. ಆದರೆ ಯಾವುದೇ ಪೂರ್ವ ಷರತ್ತುಗಳಿಲ್ಲದೆ ಕೋರಿಕೆಯನ್ನು ಅನುಮೋದಿಸುವಂತೆ ಭಾರತ ಆಗ್ರಹಿಸಿದೆ ಎಂದು ಮೂಲಗಳು ಹೇಳಿವೆ.
ಮಲ್ಯ ಯಾವೆಲ್ಲಾ ದೇಶಗಳಲ್ಲಿ ಆಸ್ತಿಯನ್ನು ಹೊಂದಿದ್ದಾರೋ ಆ ದೇಶಗಳೊಂದಿಗೆ ಮತ್ತು ಗಡೀಪಾರು ಒಪ್ಪಂದ ಏರ್ಪಟ್ಟಿರುವ ರಾಷ್ಟ್ರಗಳೊಂದಿಗೆ ಮಲ್ಯರನ್ನು ಗಡೀಪಾರು ಮಾಡುವ ಬಗ್ಗೆ ಭಾರತ ಸಕ್ರಿಯ ಪ್ರಯತ್ನ ಮುಂದುವರಿಸಿದೆ. ಈ ಯಾವುದೇ ದೇಶಗಳಿಗೆ ಮಲ್ಯ ಪ್ರಯಾಣಿಸಿದರೂ ಆತನನ್ನು ಗಡೀಪಾರು ಮಾಡುವಂತೆ ಒತ್ತಡ ಹೇರುವುದು ಇದರ ಉದ್ದೇಶವಾಗಿದೆ ಎಂದು ಭಾರತದ ಮೂಲಗಳು ಹೇಳಿವೆ.