ಭಾರತಕ್ಕೆ ಪ್ರತಿಸುಂಕದ ಬರೆ ಎಳೆದ ಟ್ರಂಪ್; ಉಕ್ಕು,ಆಲ್ಯುಮಿನಿಯಂ ಮತ್ತು ವಾಹನ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಸಾಧ್ಯತೆ
ಎಪ್ರಿಲ್ 5ರಿಂದ ಅನ್ವಯವಾಗುವಂತೆ ಜಾರಿ

Photo : PTI
ವಾಶಿಂಗ್ಟನ್: ಟ್ರಂಪ್ ಆಡಳಿತವು ಭಾರತದ ಉತ್ಪನ್ನಗಳ ಮೇಲೆ ಶೇ.27ರಷ್ಟು ಪ್ರತಿ ಸುಂಕವನ್ನು ವಿಧಿಸಿದೆ. ಟ್ರಂಪ್ ಆಡಳಿತದ ಈ ನಡೆಯು ಅಮೆರಿಕಕ್ಕೆ ರಫ್ತಾಗುವ ಭಾರತೀಯ ಉತ್ಪನ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನಿರೀಕ್ಷೆಯಿದೆ. ಆದರೆ ಅಮೆರಿಕದ ಸರಕುಗಳಿಗೆ ಭಾರತವು ಶೇ.52ರಷ್ಟು ಸುಂಕ ವಿಧಿಸುತ್ತಿದ್ದು, ಅಮೆರಿಕವು ಅದರ ಅರ್ಧಾಂಶದಷ್ಟು ಸುಂಕವನ್ನು ಮಾತ್ರವೇ ವಿಧಿಸಿದೆ. ಆದಾಗ್ಯೂ ಪ್ರತಿಸ್ಪರ್ಧಿ ದೇಶಗಳಿಗೂ ಇನ್ನೂ ಹೆಚ್ಚಿನ ಪ್ರತಿಸುಂಕವನ್ನು ವಿಧಿಸಲಾಗಿದ್ದು, ಅವುಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಜಾಗತಿಕವಾಗಿ ಅಮೆರಿಕದ ಉತ್ಪನ್ನಗಳಿಗೆ ಹಲವಾರು ದೇಶಗಳು ಅಧಿಕ ಸುಂಕವನ್ನು ಹೇರುತ್ತಿರುವುದಕ್ಕೆ ಎದಿರೇಟು ನೀಡುವ ಕ್ರಮವಾಗಿ ಭಾರತ, ಚೀನಾ ಸೇರಿದಂತೆ ಸುಮಾರು 60 ದೇಶಗಳ ಉತ್ಪನ್ನಗಳ ಮೇಲೆ ಬುಧವಾರ ಪ್ರತಿಸುಂಕವನ್ನು ಘೋಷಿಸಿದ್ದಾರೆ.
ಶ್ವೇತಭವನದ ಗುಲಾಬಿವನದಲ್ಲಿ ವಿವಿಧ ರಾಷ್ಟ್ರಗಳಿಗೆ ಪ್ರತಿಸುಂಕ ಹೇರಿಕೆಯನ್ನು ಘೋಷಿಸಿ ಮಾತನಾಡಿದ ಟ್ರಂಪ್ ಅವರು, ಅಮೆರಿಕದ ಪಾಲಿಗೆ ಇದೊಂದು ʼವಿಮೋಚನಾ ದಿನʼವೆಂದು ಬಣ್ಣಿಸಿದರು. ಅಮೆರಿಕದ ಕೈಗಾರಿಕಾಕ್ಷೇತ್ರವು ಮರುಜನ್ಮ ಪಡೆದ ಹಾಗೂ ಅಮೆರಿಕದ ವಿಧಿಯನ್ನು ಮರಳಿಪಡೆದುಕೊಂಡ ಹಾಗೂ ಭಾರತವನ್ನು ಮತ್ತೊಮ್ಮೆ ಶ್ರೀಮಂತ ರಾಷ್ಟ್ರವನ್ನಾಗಿಸುವುದನ್ನು ಆರಂಭಿಸಿದ ದಿನ ಇದಾಗಿದೆ. ಅಮೆರಿಕವನ್ನು ನಾವು ಶ್ರೀಮಂತ ಹಾಗೂ ಶ್ರೇಷ್ಠ ದೇಶವನ್ನಾಗಿಸಲಿದ್ದೇವೆ ಎಂದು ಟ್ರಂಪ್ ಹೇಳಿದರು.
ಭಾರತ,ಚೀನಾ,ಯುರೋಪ್ ಒಕ್ಕೂಟ, ಜಪಾನ್, ತೈವಾನ್,ದ.ಕೊರಿಯ,ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನವು ಅಮೆರಿಕದ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಸುಂಕಗಳು ಹಾಗೂ ಇನ್ನು ಮುಂದೆ ಈ ದೇಶಗಳ ಪಾವತಿಸಬೇಕಾದ ಪ್ರತಿಸುಂಕಗಳ ಪಟ್ಟಿಯನ್ನು ಅವರು ಪ್ರದರ್ಶಿಸಿದರು.
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ಆನಂತರ ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ಫೆಬ್ರವರಿಯಲ್ಲಿ ವಾಶಿಂಗ್ಟನ್ಗೆ ಭೇಟಿ ನೀಡಿದ್ದರು. ಫೆಬ್ರವರಿ 13ರಂದು ಶ್ವೇತಭವನದಲ್ಲಿ ಮೋದಿ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಅವರು ಭಾರತವು ಸುಂಕದ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಾಗಿದೆ. ವ್ಯಾಪಾರದ ನಿರ್ಬಂಧಗಳು ಹಾಗೂ ಅತ್ಯಂತ ಕಠಿಣವಾದ ಸುಂಕಗಳ ಕಾರಣದಿಂದಾಗಿ ಭಾರತದಲ್ಲಿ ಅಮೆರಿಕದ ಉತ್ಪನ್ನಗಳನ್ನು ಮಾರಾಟ ಮಾಡುವುದು ತುಂಬಾ ಕಷ್ಟವಾಗಿದೆ.
ಭಾರತದ ಜೊತೆ ಅಮೆರಿಕವು ಪ್ರಸಕ್ತ 100 ಶತಕೋಟಿ ಡಾಲರ್ ಗೂ ಅಧಿಕ ಮೊತ್ತದ ವ್ಯಾಪಾರದ ಕೊರತೆಯನ್ನು ಹೊಂದಿದೆ ಟ್ರಂಪ್ ಹೇಳಿದ್ದರು.
ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಶೇ.52ರಷ್ಟು ಸುಂಕವನ್ನು ವಿಧಿಸುತ್ತಿರುವುದಾಗಿ ಈ ಪಟ್ಟಿಯಲ್ಲಿ ತೋರಿಸಲಾಗಿತ್ತು. ಆದರೆ ಅಮೆರಿಕವು ಇದೀಗ ಕಡಿತದ ದರದಲ್ಲಿ ಭಾರತೀಯ ಉತ್ಪನ್ನಗಳ ಮೇಲೆ ಶೇ.27ರಷ್ಟು ಪ್ರತಿಸುಂಕವನ್ನು ಹೇರಲಿದೆಯೆಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
"ಸುಂಕದ ವಿಚಾರದಲ್ಲಿ ಭಾರತವು ಅತ್ಯಂತ ಕಠಿಣ ನಿಲುವನ್ನು ಹೊಂದಿದೆ. ಭಾರತದ ಪ್ರಧಾನಿಯವರು ಇತ್ತೀಚೆಗಷ್ಟೇ ಭೇಟಿ ನೀಡಿ ತೆರಳಿದ್ದಾರೆ. ಅವರು ನನ್ನ ಶ್ರೇಷ್ಠ ಗೆಳೆಯರೂ ಹೌದು. ʼನೀವು ನನ್ನ ಸ್ನೇಹಿತ. ಆದರೆ ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲʼ ಎಂದು ನಾನವರಿಗೆ ಹೇಳಿದ್ದೆ. ಅವರು (ಭಾರತ) ನಮಗೆ ಶೇ.52ರಷ್ಟು ಸುಂಕವನ್ನು ವಿಧಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಆಷ್ಟೇ ಏಕೆ ಹಲವು ದಶಕಗಳಿಂದ ನಾವು ಅವರಿಗೆ (ಭಾರತ)ಯಾವುದೇ ಸುಂಕವನ್ನು ವಿಧಿಸುತ್ತಿರಲಿಲ್ಲ".
ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
►► ಚೀನಾಕ್ಕೆ ಶೇ.54,ಬಾಂಗ್ಲಾಕ್ಕೆ ಶೇ.37 ಪ್ರತಿಸುಂಕ:
ಭಾರತಕ್ಕೆ ಶೇ.27ರಷ್ಟು ಪ್ರತಿಸುಂಕವನ್ನು ವಿಧಿಸಲಾಗಿದ್ದರೆ, ಚೀನಾ ಶೇ.54, ಬಾಂಗ್ಲಾ ಶೇ.37, ತೈವಾನ್ ಶೇ.32, ಥಾಯ್ಲೆಂಡ್ಗೆ ಶೇ. 36 ರಷ್ಟು ಪ್ರತಿ ಸುಂಕವನ್ನು ಟ್ರಂಪ್ ಆಡಳಿತ ವಿಧಿಸಿದೆ. ವಿವಿಧ ದೇಶಗಳಿಗೆ ಶೇ.10ರಿಂದ ಶೇ.49ರವರೆಗೆ ಟ್ರಂಪ್ ಪ್ರತಿ ಸುಂಕವನ್ನು ವಿಧಿಸಿದ್ದಾರೆ.