ಭಾರತ- ಮಧ್ಯಪ್ರಾಚ್ಯ- ಯುರೋಪ್ ಕಾರಿಡಾರ್: ನಿಕಟ ಕಾರ್ಯನಿರ್ವಹಣೆಗೆ ಭಾರತ-ಫ್ರಾನ್ಸ್ ಒಪ್ಪಿಗೆ

Photo Credit | PTI
ಪ್ಯಾರಿಸ್: ಭಾರತ- ಮಧ್ಯಪ್ರಾಚ್-ಯುರೋಪ್ ಕಾರಿಡಾರ್(ಐಎಂಇಸಿ) ಅನುಷ್ಠಾನಗೊಳಿಸುವಲ್ಲಿ ನಿಕಟವಾಗಿ ಕಾರ್ಯನಿರ್ವಹಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರೋನ್ ಸಮ್ಮತಿಸಿದ್ದಾರೆ.
ಫ್ರಾನ್ಸ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಅಧ್ಯಕ್ಷ ಮಾಕ್ರೋನ್ ಜತೆ ಸಭೆ ನಡೆಸಿದರು. `ಸಂಪರ್ಕ, ಸುಸ್ಥಿರ ಬೆಳವಣಿಗೆಯ ಪಥಗಳು ಮತ್ತು ಈ ಪ್ರದೇಶಗಳಾದ್ಯಂತ ಶುದ್ಧ ಇಂಧನದ ಲಭ್ಯತೆಗೆ ಐಎಂಇಸಿಯ ಮಹತ್ವವನ್ನು ಒತ್ತಿಹೇಳಿದರು. ಈ ಯೋಜನೆಯಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಆಯಕಟ್ಟಿನ ಸ್ಥಳದಲ್ಲಿರುವ ಮಾರ್ಸೈಲ್ ನಗರ ಅತ್ಯಂತ ಪ್ರಮುಖವಾಗಿದೆ' ಎಂದು ಉಭಯ ನಾಯಕರ ಜಂಟಿ ಹೇಳಿಕೆ ತಿಳಿಸಿದೆ.
ಯುರೋಪ್, ಪಶ್ಚಿಮ ಏಶ್ಯಾ ಮತ್ತು ಇಂಡೊ-ಪೆಸಿಫಿಕ್ನಲ್ಲಿನ ಇತ್ತೀಚಿನ ಭೌಗೋಳಿಕ ರಾಜಕೀಯ ಬೆಳವಣಿಗೆಗಳು ಮತ್ತು ಜಾಗತಿಕ, ಪ್ರಾದೇಶಿಕ ಮಹತ್ವದ ವಿಷಯಗಳ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದರು.
ವೈಜ್ಞಾನಿಕ ಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸುವ ಪ್ರಮುಖ ಅಗತ್ಯವನ್ನು ಗುರುತಿಸಿ, ಈ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ನ ಸುದೀರ್ಘ ಮತ್ತು ನಿರಂತರ ಕಾರ್ಯವನ್ನು ಉಲ್ಲೇಖಿಸಿಕೊಂಡು ಅಧ್ಯಕ್ಷ ಮಾಕ್ರೋನ್ ಮತ್ತು ಪ್ರಧಾನಿ ನರೇಂದ್ರ ಮೋದಿ 2026ರ ಮಾರ್ಚ್ನಲ್ಲಿ `ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷ' ಉಪಕ್ರಮದ ಲೋಗೋವನ್ನು ಬಿಡುಗಡೆಗೊಳಿಸುವ ಮೂಲಕ ಉಪಕ್ರಮದ ಘೋಷಣೆ ಮಾಡಿದರು.
ಭಾರತದಲ್ಲಿ ನಿರ್ಮಿಸಲಾದ ಬಹುರಾಕೆಟ್ ಲಾಂಚರ್ `ಪಿನಾಕಾ'ದ ಕಾರ್ಯನಿರ್ವಹಣೆಯನ್ನು ನಿಕಟವಾಗಿ ವೀಕ್ಷಿಸುವಂತೆ ಫ್ರಾನ್ಸ್ ಸೇನೆಗೆ ಕರೆ ನೀಡಿದ ಮೋದಿ , ಈ ವ್ಯವಸ್ಥೆಯನ್ನು ಫ್ರಾನ್ಸ್ ಪಡೆದರೆ ಭಾರತ-ಫ್ರಾನ್ಸ್ ರಕ್ಷಣಾ ಸಂಬಂಧಗಳಲ್ಲಿ ಮತ್ತೊಂದು ಮೈಲುಗಲ್ಲು ಸಾಧ್ಯವಾಗಲಿದೆ ಎಂದರು.
ಭಾರತ-ಫ್ರಾನ್ಸ್ ಸಂಬಂಧ ಕಾರ್ಯತಂತ್ರದ ಸಹಭಾಗಿತ್ವವನ್ನು ಹೊಂದಿದೆ. 25 ವರ್ಷಗಳನ್ನು ಪೂರ್ಣಗೊಳಿಸಿರುವ ಸಹಭಾಗಿತ್ವ ಸ್ಥಿರ ಮತ್ತು ಸರ್ವತೋಮುಖ ಪ್ರಗತಿಯನ್ನು ಸಾಧಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಹೇಳಿದ್ದಾರೆ.
ಭಾರತ-ಫ್ರಾನ್ಸ್ ನಡುವಿನ ನಾಗರಿಕ ಪರಮಾಣು ಸಂಬಂಧಗಳನ್ನು ಉಭಯ ನಾಯಕರು ಗುರುತಿಸಿದರು ಮತ್ತು ಪರಮಾಣು ಶಕ್ತಿಯ ಶಾಂತಿಯುತ ಬಳಕೆಯ ಬಗ್ಗೆ ಉಭಯ ದೇಶಗಳ ಪ್ರಯತ್ನವನ್ನು ಉಲ್ಲೇಖಿಸಿದರು.
ನಾಗರಿಕ ಪರಮಾಣು ಶಕ್ತಿಗೆ ಸಂಬಂಧಿಸಿದ ವಿಶೇಷ ಕಾರ್ಯಪಡೆಯ ಪ್ರಥಮ ಸಭೆಯನ್ನು, `ಸ್ಮಾಲ್ ಮೋಡ್ಯುಲರ್ ರಿಯಾಕ್ಟರ್(ಎಸ್ಎಂಆರ್)ಗೆ ಸಂಬಂಧಿಸಿದ ಉದ್ದೇಶದ ಪತ್ರಕ್ಕೆ ಸಹಿಹಾಕಿರುವುದನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮಾಕ್ರೋನ್ ಸ್ವಾಗತಿಸಿದರು. ಜತೆಗೆ ಭಾರತದ ಜಿಸಿಎನ್ಇಪಿ, ಡಿಎಇ ಮತ್ತು ಫ್ರಾನ್ಸ್ನ ಐಎನ್ಎಸ್ಟಿಎನ್, ಸಿಇಎ ನಡುವೆ ಪರಮಾಣು ವೃತ್ತಿಪರರ ತರಬೇತಿ ಮತ್ತು ಶಿಕ್ಷಣದ ಉದ್ದೇಶದ ಒಪ್ಪಂದ ಅನುಷ್ಠಾನಗೊಂಡಿರುವುದನ್ನು ಜಂಟಿ ಹೇಳಿಕೆಯಲ್ಲಿ ಸ್ವಾಗತಿಸಲಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತ್ವರಿತ ಸುಧಾರಣೆಯ ಅಗತ್ಯವನ್ನು ಉಭಯ ನಾಯಕರು ಒತ್ತಿಹೇಳಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ತನ್ನ ದೃಢ ಬೆಂಬಲವನ್ನು ಫ್ರಾನ್ಸ್ ಪುನರುಚ್ಚರಿಸಿದೆ.
*ಪ್ರಧಾನಿ ಮೋದಿ ಅಮೆರಿಕಕ್ಕೆ ನಿರ್ಗಮನ
ತನ್ನ ವಿದೇಶ ಪ್ರವಾಸದ ಫ್ರಾನ್ಸ್ ಚರಣವನ್ನು ಬುಧವಾರ ಪೂರ್ಣಗೊಳಿಸಿದ ಬಳಿಕ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ದ್ವಿಪಕ್ಷೀಯ ಸಭೆಗಾಗಿ ವಾಷಿಂಗ್ಟನ್ ಗೆ ನಿರ್ಗಮಿಸಿದರು. ಮಾರ್ಸೈಲ್ ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷ ಮಾಕ್ರೋನ್ ಪ್ರಧಾನಿ ಮೋದಿಯನ್ನು ಹಾರ್ದಿಕವಾಗಿ ಬೀಳ್ಕೊಟ್ಟರು ಎಂದು ವಿದೇಶಾಂಗ ಇಲಾಖೆಯ ಮೂಲಗಳು ಹೇಳಿವೆ.
ಪ್ರಧಾನಿ ಮೋದಿಯವರ ಎರಡು ದಿನಗಳ ಅಮೆರಿಕ ಭೇಟಿಯು ಅಮೆರಿಕ-ಭಾರತ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ವಿದೇಶಾಂಗ ಇಲಾಖೆ ಬಣ್ಣಿಸಿದೆ.