ʼಅಲ್ಪಸಂಖ್ಯಾತರʼ ವಿಚಾರದಲ್ಲಿ ಭಾರತ ದ್ವಿಮುಖ ನೀತಿ ಅನುಸರಿಸುತ್ತಿದೆ: ಬಾಂಗ್ಲಾದೇಶ
ಮಹಮ್ಮದ್ ಯೂನಸ್ (Photo: PTI)
ಢಾಕಾ: ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆ ಬಗ್ಗೆ ಭಾರತವು ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಮತ್ತು ನೆರೆಯ ದೇಶ ಭಾರತದ ಮಾಧ್ಯಮಗಳು ಬಾಂಗ್ಲಾದ ಬಗ್ಗೆ ತಪ್ಪು ಮಾಹಿತಿ ರವಾನಿಸುತ್ತಿದೆ ಎಂದು ಬಾಂಗ್ಲಾದೇಶ ಹೇಳಿಕೊಂಡಿದೆ.
ದೇಶದ್ರೋಹದ ಆರೋಪದ ಮೇಲೆ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಂಧಿಸಲಾಗಿದೆ ಎಂಬ ವಿವಾದದ ಬಗ್ಗೆ ಫೇಸ್ಬುಕ್ ಪೋಸ್ಟ್ನಲ್ಲಿ ಪ್ರತಿಕ್ರಿಯಿಸಿದ ಬಾಂಗ್ಲಾ ಸರ್ಕಾರದ ಕಾನೂನು ವ್ಯವಹಾರಗಳ ಸಲಹೆಗಾರ ಆಸಿಫ್ ನಝ್ರುಲ್, ಬಾಂಗ್ಲಾದೇಶದ ಬಗ್ಗೆ ಭಾರತದ ಅನಗತ್ಯ ಕಾಳಜಿ ಮುಂದುವರೆದಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿವೆ. ಆದರೆ ಅವರಿಗೆ ಆ ಘಟನೆಗಳ ಬಗ್ಗೆ ಯಾವುದೇ ಪಶ್ಚಾತ್ತಾಪ ಅಥವಾ ಮುಜುಗರವಿಲ್ಲ. ಭಾರತದ ಈ ದ್ವಂದ್ವ ನೀತಿಯು ಖಂಡನೀಯ ಮತ್ತು ಆಕ್ಷೇಪಾರ್ಹವಾದುದು. ಸಮೀಕ್ಷೆಯೊಂದನ್ನು ಉಲ್ಲೇಖಿಸಿದ ನಝ್ರುಲ್, ಹಿಂದಿನ ಅವಾಮಿ ಲೀಗ್ ಸರ್ಕಾರಕ್ಕೆ ಹೋಲಿಸಿದರೆ ಮಧ್ಯಂತರ ಸರ್ಕಾರ ದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಉತ್ತಮ ಭದ್ರತೆಯನ್ನು ನೀಡುತ್ತಿದೆ ಎಂದು ಬಹುಪಾಲು ಬಾಂಗ್ಲಾದೇಶಿ ಪ್ರಜೆಗಳು ನಂಬಿದ್ದಾರೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ಮಹಮ್ಮದ್ ಯೂನಸ್ ನೇತೃತ್ವದ ಸರಕಾರವು ಭಾರತದ ಮಾಧ್ಯಮಗಳಲ್ಲಿನ ತಪ್ಪು ಮಾಹಿತಿಗಳಿಗೆ ʼಸತ್ಯʼದೊಂದಿಗೆ ಪ್ರತ್ಯುತ್ತರ ನೀಡಬೇಕೆಂದು ದೇಶದ ಪತ್ರಕರ್ತರಿಗೆ ಒತ್ತಾಯಿಸಿದೆ. ಯೂನಸ್ ಅವರ ಪತ್ರಿಕಾ ಕಾರ್ಯದರ್ಶಿ ಶಫೀಕುಲ್ ಆಲಂ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾವು ನಮ್ಮ ಕಥೆಗಳನ್ನು ನಮ್ಮದೇ ರೀತಿಯಲ್ಲಿ ಹೇಳಬೇಕು ಇಲ್ಲದಿದ್ದರೆ ಭಾರತೀಯ ಮಾಧ್ಯಮಗಳು ಅವರಿಗೆ ಬೇಕಾದಂತೆ ನಿರೂಪಣೆ ಮಾಡುತ್ತವೆ. ಭಾರತೀಯರು ಬುದ್ಧಿವಂತರು ಎಂದು ಕೆಲವರು ಭಾವಿಸಬಹುದು. ಆದರೆ ನನ್ನನ್ನು ನಂಬಿರಿ, ನೀವು ಸತ್ಯದ ಹಾದಿಯಲ್ಲಿದ್ದರೆ, ಯಾವುದೇ ತಪ್ಪು ಮಾಹಿತಿ ಅಭಿಯಾನಕ್ಕೆ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ಆಂತರಿಕ ವ್ಯವಹಾರಗಳಲ್ಲಿ ಭಾರತದ ಆಪಾದಿತ ಹಸ್ತಕ್ಷೇಪವನ್ನು ವಿರೋಧಿಸಿ ವಿದ್ಯಾರ್ಥಿಗಳ ಗುಂಪು ಢಾಕಾ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಈ ಹೇಳಿಕೆ ಹೊರ ಬಿದ್ದಿದೆ.