ನವ ಕುವೈಟ್ ಗೆ ಅಗತ್ಯವಿರುವ ತಂತ್ರಜ್ಞಾನ, ಮಾನವ ಶಕ್ತಿಯನ್ನು ಭಾರತ ಹೊಂದಿದೆ : ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ | PTI
ಕುವೈಟ್ ಸಿಟಿ : ಎರಡು ದಿನಗಳ ಕುವೈಟ್ ಭೇಟಿಗಾಗಿ ಶನಿವಾರ ಕುವೈಟ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಕುವೈಟ್ ವಿಮಾನ ನಿಲ್ದಾಣದಲ್ಲಿ ಪ್ರಥಮ ಉಪಪ್ರಧಾನಿ, ರಕ್ಷಣಾ ಸಚಿವ ಶೇಖ್ ಫಹಾದ್ ಯೂಸೆಫ್ ಸೌದ್ ಅಲ್-ಸಭಾ, ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ-ಅಲ್ ಯಾಹ್ಯಾ, ಇತರ ಹಲವು ಸಚಿವರು ಹಾಗೂ ಗಣ್ಯರು ಆತ್ಮೀಯವಾಗಿ ಬರಮಾಡಿಕೊಂಡರು.
1981ರಲ್ಲಿ ಇಂದಿರಾ ಗಾಂಧಿಯವರ ಬಳಿಕ ಕುವೈಟ್ ಗೆ ಭೇಟಿ ನೀಡಿರುವ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ ನರೇಂದ್ರ ಮೋದಿ. ಕುವೈಟ್ ನ ಶೇಖ್ ಸಾದ್ ಅಲ್ ಅಬ್ದುಲ್ಲಾ ಒಳಾಂಗಣ ಕ್ರೀಡಾ ಸಂಕರ್ಣದಲ್ಲಿ ನಡೆದ `ಹಲಾ ಮೋದಿ' ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ` ತಲೆಮಾರುಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಕುವೈತ್ನೊಂದಿಗಿನ ಐತಿಹಾಸಿಕ ಸಂಪರ್ಕವನ್ನು ಆಳವಾಗಿ ಗೌರವಿಸುತ್ತೇನೆ. ನಾವು ವ್ಯಾಪಾರ ಮತ್ತು ಇಂಧನ ಕ್ಷೇತ್ರದಲ್ಲಿ ಬಲಿಷ್ಟ ಪಾಲುದಾರರು ಮಾತ್ರವಲ್ಲ, ಪಶ್ಚಿಮ ಏಶ್ಯಾ ವಲಯದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಯಲ್ಲಿ ಸಮಾನ ಆಸಕ್ತಿಯನ್ನು ಹಂಚಿಕೊಂಡಿದ್ದೇವೆ' ಎಂದರು.
ಕುವೈಟ್ ನ ನೆಲಕ್ಕೆ ಕಾಲಿಟ್ಟೊಡನೆ ಆತ್ಮೀಯತೆಯ ಅನುಭವವನ್ನು ಹೊಂದಿದ್ದೇನೆ. ಭಾರತದ ವಿವಿಧ ರಾಜ್ಯಗಳಿಂದ ಬಂದಿರುವ ನಿಮ್ಮನ್ನು ನೋಡುವಾಗ `ಮಿನಿ ಹಿಂದುಸ್ತಾನ'ವನ್ನು ನೋಡಿದಂತೆ ಆಗುತ್ತದೆ' ಎಂದು ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಹೇಳಿದ ಮೋದಿ `ಕುಂಭ ಮೇಳ, ಗಣರಾಜ್ಯೋತ್ಸವಕ್ಕೆ ಆಗಮಿಸಿ ಭಾರತದಲ್ಲಿನ ಹಬ್ಬ, ಜಾತ್ರೆಗಳ ಖುಷಿಯಲ್ಲಿ ಪಾಲ್ಗೊಳ್ಳುವಂತೆ ಮತ್ತು ತಮ್ಮೊಂದಿಗೆ ಕುವೈಟ್ ನಾಗರಿಕರನ್ನೂ ಕರೆತರುವಂತೆ ಆಹ್ವಾನಿಸಿದರು.
ಡಿಜಿಟಲ್ ಕ್ಷೇತ್ರದಲ್ಲಿ ಭಾರತ ಸಾಧನೆಯನ್ನು ವಿವರಿಸಿದ ಅವರು `ಸಣ್ಣ ಟೀ ಸ್ಟಾಲ್ ನಲ್ಲಿ ಒಂದು ಕಪ್ ಚಹಾ ಕುಡಿಯುವಾಗಲೂ ಭಾರತೀಯರು ಯುಪಿಐ ಬಳಸುತ್ತಿದ್ದಾರೆ. ನಾವು ಡಿಜಿಟಲೀ ಸ್ಮಾರ್ಟ್ ಆಗಿದ್ದೇವೆ ಮತ್ತು ಇದು ಆರಂಭ ಮಾತ್ರ' ಎಂದರು.
ಕುವೈಟ್-ಭಾರತದ ನಡುವಿನ ಸಂಬಂಧ ಬಲಿಷ್ಟವಾಗಿದೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಕುವೈಟ್ ನಮಗೆ ದ್ರವ ಆಮ್ಲಜನಕವನ್ನು ಪೂರೈಸಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ.