ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ರಾಜಕೀಯ ದಾಳವಾಗಬಾರದು: ಚೀನಾ
Photo- PTI
ಬೀಜಿಂಗ್ : ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಘೋಷಿಸಲಾದ ಭಾರತ-ಮಧ್ಯಪ್ರಾಚ್ಯ- ಯುರೋಪ್ ಆರ್ಥಿಕ ಕಾರಿಡಾರ್ ಯೋಜನೆಯು ಎಲ್ಲಿಯವರೆಗೆ ಭೌಗೋಳಿಕ-ರಾಜಕೀಯ ಸಾಧನವಾಗುವುದಿಲ್ಲವೋ ಅದುವರೆಗೆ ಅದನ್ನು ಸ್ವಾಗತಿಸುವುದಾಗಿ ಚೀನಾ ಹೇಳಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮೂಲಸೌಕರ್ಯವನ್ನು ನಿರ್ಮಿಸಲು ನಿಜವಾಗಿ ನೆರವಾಗುವ ಎಲ್ಲಾ ಉಪಕ್ರಮಗಳನ್ನೂ, ಸಂಪರ್ಕ ಮತ್ತು ಸಾಮಾನ್ಯ ಅಭಿವೃದ್ಧಿಯನ್ನು ಉತ್ತೇಜಿಸಲು ನಡೆಸುವ ಪ್ರಾಮಾಣಿಕ ಪ್ರಯತ್ನವನ್ನು ಚೀನಾ ಯಾವತ್ತೂ ಸ್ವಾಗತಿಸುತ್ತದೆ . ಇದೇ ಸಮಯದಲ್ಲಿ ವಿವಿಧ ಸಂಪರ್ಕ ಉಪಕ್ರಮಗಳು ಮುಕ್ತವಾಗಿರಬೇಕು, ಅಂತರ್ಗತವಾಗಿರಬೇಕು ಮತ್ತು ಸಹಯೋಗವನ್ನು ರೂಪಿಸಬೇಕು ಮತ್ತು ಭೌಗೋಳಿಕ ರಾಜಕೀಯ ಸಾಧನವಾಗಬಾರದು ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.
ಹೊಸ ಕಾರಿಡಾರ್ ಯೋಜನೆಯು ಚೀನಾದ ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮ(ಬಿಆರ್ಐ)ಗೆ ಪ್ರತಿಸ್ಪರ್ಧಿಯಾದ ಮೊದಲ ಜಾಗತಿಕ ಸಂಪರ್ಕ ಯೋಜನೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ 2013ರಲ್ಲಿ ಪ್ರಾರಂಭಿಸಿದ ಮಹಾತ್ವಾಕಾಂಕ್ಷೆಯ ಬಹುಶತಕೋಟಿ ಡಾಲರ್ ಬಿಆರ್ಐ ಯೋಜನೆ ಚೀನಾವನ್ನು ಆಗ್ನೇಯ ಏಶ್ಯಾ, ಮಧ್ಯ ಏಶ್ಯಾ, ಗಲ್ಫ್ ಪ್ರದೇಶ, ಆಫ್ರಿಕಾ ಮತ್ತು ಯುರೋಪ್ನೊಂದಿಗೆ ಸಂಪರ್ಕಿಸುತ್ತದೆ. ಆದರೆ ದಶಕದಷ್ಟು ಹಳೆಯದಾದ ಬಿಆರ್ಐ ಯೋಜನೆ ಶತಕೋಟಿ ಡಾಲರ್ಗಳ ಹೂಡಿಕೆಯನ್ನು ಒಳಗೊಂಡಿದ್ದು ಯೋಜನೆಯಿಂದ ಹಿಂದೆ ಸರಿಯುವುದಾಗಿ ಇಟಲಿ ಘೋಷಿಸಿರುವುದು ಚೀನಾಕ್ಕೆ ದೊಡ್ಡ ಹಿನ್ನಡೆಯಾಗಿದೆ