ತನ್ನ ಪ್ರಜೆಗಳನ್ನು ಹಿಂಪಡೆಯಲು ಭಾರತ ಸಿದ್ಧ : ಪ್ರಧಾನಿ ಮೋದಿ
►ಅಕ್ರಮ ವಲಸಿಗರ ಕುರಿತ ಟ್ರಂಪ್ ನಿಲುವಿಗೆ ಅನುಮೋದನೆ

Photo credit: X/@narendramodi
ವಾಷಿಂಗ್ಟನ್ : ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಕ್ರಮಗಳನ್ನು ಅನುಮೋದಿಸಿರುವ ಪ್ರಧಾನಿ ನರೇಂದ್ರ ಮೋದಿ `ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಸಿದ್ಧವಿದೆ ' ಎಂದು ಹೇಳಿದ್ದು ಈ ವಿಷಯದಲ್ಲಿ ಭಾರತದ ನಿಲುವನ್ನು ಪುನರುಚ್ಚರಿಸಿದ್ದಾರೆ.
ಇತರ ದೇಶಗಳಲ್ಲಿ ಅಕ್ರಮವಾಗಿ ನೆಲೆಸಿರುವವರು ಅಲ್ಲಿ ಯಾವುದೇ ಕಾನೂನುಬದ್ಧ ಹಕ್ಕನ್ನು ಹೊಂದಿಲ್ಲ. ಭಾರತ ಮತ್ತು ಅಮೆರಿಕದ ವಿಷಯಕ್ಕೆ ಬಂದರೆ, ಪರಿಶೀಲನೆಯ ಬಳಿಕ ಅಕ್ರಮ ಭಾರತೀಯ ವಲಸಿಗರೆಂದು ಗುರುತಿಸಲಾದವರನ್ನು, ಅಮೆರಿಕದಲ್ಲಿ ಕಾನೂನುಬಾಹಿರವಾಗಿ ಉಳಿದುಕೊಂಡವರನ್ನು ಹಿಂದಕ್ಕೆ ಪಡೆಯಲು ಭಾರತ ಸಿದ್ಧ ಎಂದು ಟ್ರಂಪ್ ಜತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಸಾಮಾನ್ಯವಾಗಿ ಅಕ್ರಮ ವಲಸಿಗರು ಸಾಮಾನ್ಯ ಕುಟುಂಬಕ್ಕೆ ಸೇರಿರುತ್ತಾರೆ. ಇವರಿಗೆ ದೊಡ್ಡ ಕನಸನ್ನು ತೋರಿಸಿ ದಾರಿ ತಪ್ಪಿಸಲಾಗುತ್ತದೆ ಮತ್ತು ಅಮೆರಿಕಕ್ಕೆ ಕರೆತರಲಾಗುತ್ತದೆ ಎಂದು ಮೋದಿ ಹೇಳಿದ್ದು, ಅಮಾಯಕರನ್ನು ವಂಚಿಸಿ, ದಾರಿತಪ್ಪಿಸಿ ಅಮೆರಿಕಕ್ಕೆ ಮಾನವ ಕಳ್ಳಸಾಗಣೆ ಮಾಡುವ ಸಂಪೂರ್ಣ ವ್ಯವಸ್ಥೆಯ ಮೇಲೆ ಸರಕಾರಗಳು ದಾಳಿ ನಡೆಸಬೇಕಿದೆ ಎಂದು ಆಗ್ರಹಿಸಿದ್ದಾರೆ. ಮಾನವ ಕಳ್ಳಸಾಗಣೆಯ ದುಷ್ಟಜಾಲವನ್ನು ಬೇರುಸಹಿತ ಕಿತ್ತೊಗೆಯಲು ಭಾರತ ಮತ್ತು ಅಮೆರಿಕ ಜತೆಗೂಡಿ ಕಾರ್ಯನಿರ್ವಹಿಸಬೇಕಿದೆ. ಇದೊಂದು ದೊಡ್ಡ ಯುದ್ಧವಾಗಿದ್ದು ಈ ಜಾಲವನ್ನು ನಿರ್ಮೂಲನೆ ಮಾಡುವ ಭಾರತದ ಕ್ರಮಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪೂರ್ಣ ಬೆಂಬಲಿಸುವ ವಿಶ್ವಾಸವಿದೆ ಎಂದು ಮೋದಿ ಹೇಳಿದ್ದಾರೆ.
ಕಳೆದ ವಾರ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಭಾರತೀಯರನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಮೂಲಗಳ ಪ್ರಕಾರ, ಅಮೆರಿಕದಿಂದ ಗಡೀಪಾರು ಮಾಡಿದ ಭಾರತೀಯ ವಲಸಿಗರನ್ನು ಹೊತ್ತ ಎರಡನೇ ವಿಮಾನ ಫೆಬ್ರವರಿ 15ರಂದು ಅಮೃತಸರದಲ್ಲಿ ಲ್ಯಾಂಡ್ ಆಗಲಿದೆ.
ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಸಹಯೋಗವನ್ನು ಬಲಪಡಿಸಲು, ವಿದೇಶದಲ್ಲಿ ಅಧ್ಯಯನ ನಡೆಸಲು ಅವಕಾಶ ಮಾಡಿಕೊಡಲು ಹಾಗೂ ಭಾರತದಲ್ಲಿ ಅಮೆರಿಕದ ಪ್ರಮುಖ ಕಾಲೇಜುಗಳ ಕ್ಯಾಂಪಸ್ ಅನ್ನು ಸ್ಥಾಪಿಸುವ ಅವಕಾಶಗಳನ್ನು ಅನ್ವೇಷಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಜಂಟಿ ಹೇಳಿಕೆ ತಿಳಿಸಿದೆ.
*ಪಾಕ್ಗೆ ಪರೋಕ್ಷ ಎಚ್ಚರಿಕೆ
ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಭೆಯ ಬಳಿಕ ಬಿಡುಗಡೆಗೊಳಿಸಿದ ಜಂಟಿ ಹೇಳಿಕೆಯಲ್ಲಿ ಮುಂಬೈ ಮತ್ತು ಪಠಾಣ್ಕೋಟ್ ದಾಳಿಯ ದುಷ್ಕರ್ಮಿಗಳನ್ನು ಶಿಕ್ಷಿಸಲು ಮತ್ತು ಗಡಿಯಾಚೆಗಿನ ಭಯೋತ್ಪಾದಕ ದಾಳಿ ನಡೆಸಲು ತನ್ನ ಭೂಭಾಗವನ್ನು ಬಳಸಲು ಅವಕಾಶ ನೀಡಬಾರದು ಎಂದು ಪಾಕಿಸ್ತಾನವನ್ನು ಆಗ್ರಹಿಸಲಾಗಿದೆ.
ಜಾಗತಿಕ ಭಯೋತ್ಪಾದನೆ ಸಮಸ್ಯೆಯ ವಿರುದ್ಧ ಒಗ್ಗೂಡಿ ಹೋರಾಡಲು ಮತ್ತು ಭಯೋತ್ಪಾದಕರ ಸುರಕ್ಷಿತ ಸ್ವರ್ಗವನ್ನು ಜಗತ್ತಿನ ಎಲ್ಲಾ ಮೂಲೆಯಿಂದ ನಿರ್ಮೂಲನೆಗೊಳಿಸುವ ದೃಢನಿರ್ಧಾರವನ್ನು ಉಭಯ ನಾಯಕರು ಪುನರುಚ್ಚರಿಸಿದ್ದಾರೆ. ಈ ವರ್ಷದಿಂದ ಭಾರತಕ್ಕೆ ಮಿಲಿಟರಿ ಮಾರಾಟವನ್ನು ಕೋಟ್ಯಾಂತರ ಡಾಲರ್ಗಳಷ್ಟು ಹೆಚ್ಚಿಸಲಾಗುವುದು. ಭಯೋತ್ಪಾದಕರ ಬೆದರಿಕೆಯನ್ನು ಎದುರಿಸಲು ಭಾರತ ಮತ್ತು ಅಮೆರಿಕ ಈ ಹಿಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಟ್ರಂಪ್ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.