ಭಾರತ-ಅಮೆರಿಕ ಜಂಟಿ ಹೇಳಿಕೆಯಲ್ಲಿ ಪಾಕ್ ಹೆಸರು ಪ್ರಸ್ತಾವಕ್ಕೆ ಖಂಡನೆ; ಅಮೆರಿಕ ರಾಯಭಾರಿಗೆ ಪಾಕ್ ಸಮನ್ಸ್
ಇಸ್ಲಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ಸಂದರ್ಭ ಬಿಡುಗಡೆಗೊಳಿಸಲಾದ ಅಮೆರಿಕ-ಭಾರತ ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನದ ಹೆಸರು ಪ್ರಸ್ತಾವನೆ ಆಗಿರುವುದನ್ನು ಖಂಡಿಸಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ ಅಮೆರಿಕದ ರಾಯಭಾರಿಯನ್ನು ಕರೆಸಿಕೊಂಡು ಪ್ರತಿಭಟನೆ ಸಲ್ಲಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನವು ತನ್ನ ಪ್ರದೇಶದಲ್ಲಿ ಮೂಲನೆಲೆ ಹೊಂದಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಂಟಿ ಹೇಳಿಕೆಯಲ್ಲಿ ಆಗ್ರಹಿಸಲಾಗಿತ್ತು. ಇದನ್ನು ಖಂಡಿಸಿರುವ ಪಾಕ್ ವಿದೇಶಾಂಗ ಇಲಾಖೆ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಆ್ಯಂಡ್ರೂ ಶಾಫರ್‌ರನ್ನು ಕರೆಸಿಕೊಂಡು ಪ್ರತಿಭಟನೆ ಸಲ್ಲಿಸಿದೆ.
‘ಜಂಟಿ ಹೇಳಿಕೆಯು ಅನಗತ್ಯ, ಏಕಪಕ್ಷೀಯ ಮತ್ತು ದಾರಿತಪ್ಪಿಸುವ ಉಲ್ಲೇಖವನ್ನು ಹೊಂದಿದೆ. ಪಾಕಿಸ್ತಾನದ ವಿರುದ್ಧ ಭಾರತದ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ನಿರೂಪಣೆಗೆ ಉತ್ತೇಜನ ನೀಡುವಂತಹ ಹೇಳಿಕೆಗಳನ್ನು ನೀಡುವುದರಿಂದ ಅಮೆರಿಕ ದೂರ ಸರಿಯಬೇಕು. ಪಾಕ್ ಮತ್ತು ಅಮೆರಿಕ ನಡುವಿನ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ. ಆದರೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ದೃಢಗೊಳ್ಳಲು ವಿಶ್ವಾಸ ಮತ್ತು ತಿಳುವಳಿಕೆಯ ವಾತಾವರಣ ಅತ್ಯಗತ್ಯವಾಗಿದೆ’ ಎಂದು ಪಾಕ್ ವಿದೇಶಾಂಗ ಇಲಾಖೆ ಹೇಳಿದೆ.