ಭಾರತ ಎಂದಿಗೂ ತಟಸ್ಥವಾಗಿರಲಿಲ್ಲ, ಶಾಂತಿಯ ಪರವಾಗಿರುತ್ತದೆ: ಪ್ರಧಾನಿ ಮೋದಿ
ಉಕ್ರೇನ್ ಅಧ್ಯಕ್ಷರ ಜತೆ ಸಭೆ
ನರೇಂದ್ರ ಮೋದಿ , ವೊಲೊದಿಮಿರ್ ಝೆಲೆನ್ಸ್ಕಿ | PTI
ಕೀವ್: ಭಾರತ ಎಂದಿಗೂ ತಟಸ್ಥವಾಗಿರಲಿಲ್ಲ ಮತ್ತು ಯಾವತ್ತೂ ಶಾಂತಿಯ ಪರವಾಗಿರುತ್ತದೆ. ಯುದ್ಧ ಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಬೇಗ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗಾಗಿ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಭಾರತದ ಬೆಂಬಲವಿದೆ. ಸಂಘರ್ಷಕ್ಕೆ ಶಾಂತಿಯುತ ಪರಿಹಾರವು ಮನುಕುಲಕ್ಕೆ ಉತ್ತಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶುಕ್ರವಾರ ಉಕ್ರೇನ್ನಲ್ಲಿ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯವರ ಜತೆ ನಡೆಸಿದ ದ್ವಿಪಕ್ಷೀಯ ಸಭೆಯ ಬಳಿಕ ಅವರು ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಉಕ್ರೇನ್ಗೆ ಭಾರತದ ಪ್ರಧಾನಿಯ ಪ್ರಥಮ ಭೇಟಿ ಇದಾಗಿದೆ. ಉಕ್ರೇನ್ ಮತ್ತು ರಶ್ಯ ನಡುವಿನ ಯುದ್ಧದಲ್ಲಿ ಭಾರತವು ಶಾಂತಿಗಾಗಿ ದೃಢ ನಿಲುವು ತಳೆದಿದೆ. ಯುದ್ಧದ ಆರಂಭದಿಂದಲೂ ನಾವು ತಟಸ್ಥರಾಗಿಲ್ಲ. ನಾವು ಒಬ್ಬರ ಪರ ನಿಂತಿದ್ದೇವೆ. ಶಾಂತಿ, ಸೌಹಾರ್ದದ ಪರ ನಾವಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಝೆಲೆನ್ಸ್ಕಿ ಜತೆಗಿನ ಸಭೆಯಲ್ಲಿ ಮೋದಿ ಉಕ್ರೇನ್ ಅಧ್ಯಕ್ಷರನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದರು. ಕೀವ್ನ ಮಾರಿನ್ಸ್ಕಿ ಅರಮನೆಯಲ್ಲಿ ಉಭಯ ಮುಖಂಡರು ನಿಯೋಗ ಮಟ್ಟದ ಸಭೆಯಲ್ಲಿ ಪಾಲ್ಗೊಂಡರು ಮತ್ತು ಒಪ್ಪಂದ ಪತ್ರಗಳ ವಿನಿಮಯಕ್ಕೆ ಸಾಕ್ಷಿಯಾದರು. ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತ ಮಟ್ಟದ ನಿಯೋಗ ಪ್ರಧಾನಿಯ ಜತೆಗೆ ಸಭೆಯಲ್ಲಿ ಪಾಲ್ಗೊಂಡಿತ್ತು ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ. ಮೋದಿ- ಝೆಲೆನ್ಸ್ಕಿ ನಡುವಿನ ಮಾತುಕತೆ ಪ್ರಮುಖ ವಿಷಯಗಳಿಗೆ ಸೀಮಿತಗೊಂಡಿತ್ತು. ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಸಭೆಯಲ್ಲಿ ಎರಡೂ ದೇಶಗಳ ಉನ್ನತ ಮಟ್ಟದ ನಿಯೋಗ ಪಾಲ್ಗೊಳ್ಳುತ್ತದೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಕೀವ್ನ ಹಯಾಟ್ ಹೋಟೆಲ್ನಲ್ಲಿ ಭಾರತದ ಸಮುದಾಯದ ಜತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರಶ್ಯ- ಉಕ್ರೇನ್ ಯುದ್ಧದಲ್ಲಿ ಮಡಿದ ಮಕ್ಕಳಿಗೆ ಶೃದ್ಧಾಂಜಲಿ ಸಲ್ಲಿಸಿದ ಮೋದಿ `ಸಂಷರ್ಘವು ಅಮಾಯಕ ಮಕ್ಕಳಿಗೆ ವಿನಾಶಕಾರಿಯಾಗಿದೆ. ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬದವರ ಸಂಕಟವನ್ನು ನೆನೆದು ನನ್ನ ಹೃದಯ ಭಾರವಾಗಿದೆ' ಎಂದರು. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈ ಸಂದರ್ಭ ಜತೆಗಿದ್ದರು. ಬಳಿಕ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳ ಕುರಿತಾದ ಸಾಕ್ಷ್ಯ ಚಿತ್ರವನ್ನು ಉಭಯ ಮುಖಂಡರು ವೀಕ್ಷಿಸಿ ಮೃತಪಟ್ಟ ಮಕ್ಕಳಿಗೆ ಗೌರವ ಸಲ್ಲಿಸಿದರು. ಉಕ್ರೇನ್ ತಲುಪಿದ ಬಳಿಕ ಕೀವ್ನ ಓಯಸಿಸ್ ಆಫ್ ಪೀಸ್ ಪಾರ್ಕ್ನಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮೋದಿ ನಮನ ಸಲ್ಲಿಸಿದರು.