ಇರಾನ್ ದಾಳಿ: ಇಸ್ರೇಲ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮಾರ್ಗಸೂಚಿ ಬಿಡುಗಡೆ
Image Credit: X/CollinRugg
ಟೆಲ್ ಅವೀವ್: ಇಸ್ರೇಲ್ ಮೇಲಿನ ತನ್ನ ಪ್ರಥಮ ದಾಳಿಯಲ್ಲಿ ಇರಾನ್ ಸ್ಫೋಟಕ ಡ್ರೋನ್ ಗಳು ಹಾಗೂ ಕ್ಷಿಪಣಿಗಳನ್ನು ಉಡಾಯಿಸಿರುವ ಹಿನ್ನೆಲೆಯಲ್ಲಿ ಇಸ್ರೇಲ್ ನಲ್ಲಿರುವ ಭಾರತೀಯ ಪ್ರಜೆಗಳು ಶಾಂತಚಿತ್ತರಾಗಿರಬೇಕು ಹಾಗೂ ಸ್ಥಳೀಯ ಪ್ರಾಧಿಕಾರಗಳು ಬಿಡುಗಡೆ ಮಾಡಿರುವ ಸುರಕ್ಷತಾ ಶಿಷ್ಟಾಚಾರಗಳಿಗೆ ಬದ್ಧವಾಗಿರಬೇಕು ಎಂದು ಇಸ್ರೇಲ್ ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ನಾವು ಪರಿಸ್ಥಿತಿಯ ಮೇಲೆ ನಿಕಟ ನಿಗಾ ವಹಿಸಿದ್ದೇವೆ ಹಾಗೂ ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ಖಾತರಿ ಪಡಿಸಲು ಎರಡೂ ರಾಷ್ಟ್ರಗಳ ಪ್ರಾಧಿಕಾರಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಭಾರತೀಯ ರಾಯಭಾರ ಕಚೇರಿಯು ಹೇಳಿದೆ.
“ಈ ಪ್ರಾಂತ್ಯದಲ್ಲಿನ ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಇಸ್ರೇಲ್ ನಲ್ಲಿರುವ ಎಲ್ಲ ಭಾರತೀಯರು ಶಾಂತಚಿತ್ತರಾಗಿರಬೇಕು ಹಾಗೂ ಸ್ಥಳೀಯ ಪ್ರಾಧಿಕಾರಗಳು ಬಿಡುಗಡೆ ಮಾಡಿರುವ ಸುರಕ್ಷತಾ ಶಿಷ್ಟಾಚಾರಗಳಿಗೆ ಬದ್ಧವಾಗಿರಬೇಕು” ಎಂದು ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ.
ಭಾರತೀಯ ರಾಯಭಾರ ಕಚೇರಿಯು 24x7 ಸಹಾಯವಾಣಿಯನ್ನು ಒದಗಿಸಿದ್ದು, ಇನ್ನೂ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳದ ಭಾರತೀಯರು ತಮ್ಮ ಹೆಸರುಗಳನ್ನು ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಈ ನೋಂದಣಿ ಅರ್ಜಿಗಳಲ್ಲಿ ಪಾಸ್ ಪೋರ್ಟ್ ಸಂಖ್ಯೆ, ಹೆಸರು, ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ವೃತ್ತಿ ಹಾಗೂ ಇಸ್ರೇಲ್ ನಲ್ಲಿ ನೆಲೆಸಿರುವ ಸ್ಥಳ ಇತ್ಯಾದಿ ವಿವರಗಳನ್ನು ಕೇಳಲಾಗಿದೆ.
ಸಿರಿಯಾದಲ್ಲಿನ ತನ್ನ ದೂತಾವಾಸದ ಮೇಲೆ ಕ್ಷಿಪಣಿ ದಾಳಿ ನಡೆದ ನಂತರ, ಇರಾನ್ ಈ ಹಿಂದೆಂದೂ ನಡೆಸಿರದಂತಹ ದಾಳಿಯನ್ನು ಇಸ್ರೇಲ್ ಮೇಲೆ ನಡೆಸತೊಡಗಿದೆ. ಇಸ್ರೇಲ್ ಅಪರಾಧಗಳ ವಿರುದ್ಧ ನಾವು ದಾಳಿ ನಡೆಸುತ್ತಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ. ಆದರೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ಹಿರಿಯ ಕಮಾಂಡರ್ ಗಳ ಹತ್ಯೆಯಲ್ಲಿ ತನ್ನ ಪಾತ್ರವನ್ನು ದೃಢಪಡಿಸುವುದಾಗಲಿ ಅಥವಾ ನಿರಾಕರಿಸುವುದನ್ನಾಗಲಿ ಇದುವರೆಗೆ ಇಸ್ರೇಲ್ ಮಾಡಿಲ್ಲ.